ನವದೆಹಲಿ, ಸೆ.25 www.bengaluruwire.com : ಇರಾನ್ ದೇಶ ನೋಡುವ ಕುತೂಲದಿಂದ ಆಫ್ಘನ್ ದೇಶದ ಕಾಬೂಲ್‌ನಿಂದ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು ಅಪಾಯಕಾರಿ ಪ್ರಯಾಣ ಕೈಗೊಂಡಿದ್ದ 13 ವರ್ಷದ ಬಾಲಕನೊಬ್ಬ ದೆಹಲಿ ವಿಮಾನ ನಿಲ್ದಾಣದಲ್ಲಿ ಪವಾಡಸದೃಶವಾಗಿ ಬದುಕುಳಿದ ಘಟನೆ ಬೆಳಕಿಗೆ ಬಂದಿದೆ.
ಕಾಬೂಲ್‌ನಿಂದ ದೆಹಲಿಗೆ ಬಂದ ಕಮರ್ಷಿಯಲ್ ವಿಮಾನದ ಲ್ಯಾಂಡಿಂಗ್ ಗೇರ್‌ನೊಳಗೆ ಅಡಗಿಕೊಂಡಿದ್ದ ಈ ಬಾಲಕನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸೆಪ್ಟೆಂಬರ್ 21ರ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಬಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಪ್ರಕಾರ, ಬಾಲಕ ಅತಿಯಾದ ನಿರ್ಜಲೀಕರಣದಿಂದ ಬಳಲುತ್ತಿದ್ದು, ತೀವ್ರ ಚಳಿ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಗಾಯಗೊಂಡಿದ್ದರೂ, ಆತನ ಸ್ಥಿತಿ ಸ್ಥಿರವಾಗಿತ್ತು ಎಂದು ತಿಳಿಸಿದ್ದಾರೆ.
ಬಾಲಕನನ್ನು ಪ್ರಶ್ನಿಸಿದಾಗ, ಕುತೂಹಲದಿಂದ ಇರಾನ್‌ಗೆ ಪ್ರಯಾಣಿಸಬೇಕೆಂದು ಬಯಸಿದ್ದಾಗಿ ಹೇಳಿದ್ದಾನೆ. ಆದರೆ ಆತನ ಈ ಕುತೂಹಲ ಬಹುತೇಕ ಆತನ ಜೀವಕ್ಕೆ ಕುತ್ತು ತಂದಿತ್ತು. ತನಿಖೆ ನಂತರ ಬಾಲಕನನ್ನು ಅದೇ ದಿನ ಕಮ ಏರ್ ವಿಮಾನದಲ್ಲಿ ಕಾಬೂಲ್‌ಗೆ ವಾಪಸ್ ಕಳುಹಿಸಲಾಗಿದೆ.

ಆದರೆ ಈ ಘಟನೆಯು ಗಂಭೀರ ಸುರಕ್ಷತಾ ವೈಫಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಬೂಲ್‌ನಲ್ಲಿರುವ ವಿಮಾನ ನಿಲ್ದಾಣದ ಹಲವು ಹಂತದ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ಈ ಬಾಲಕ ಹೇಗೆ ವಿಮಾನದ ಲ್ಯಾಂಡಿಂಗ್ ಗೇರ್‌ಗೆ ನುಸುಳಿದ ಎಂಬುದು ಭದ್ರತಾ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಕುರಿತು ತೀವ್ರ ತನಿಖೆಗೆ ಆದೇಶಿಸಿದೆ. ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯು ತನಿಖೆಗೆ ಸಹಕಾರ ನೀಡುತ್ತಿದೆ.

ಕುತೂಹಲಕ್ಕಾಗಿ ಕೈಗೊಂಡ ಅಪಾಯಕಾರಿ ಪ್ರಯತ್ನ :
ಘಟನೆಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನ ನಿಲ್ದಾಣದ ಸಿಬ್ಬಂದಿ ಬಾಲಕ ವಿಮಾನದ ಕೆಳಗಿನಿಂದ ಹೊರಬರುವುದನ್ನು ನೋಡಿ ತಕ್ಷಣವೇ ಸಹಾಯಕ್ಕೆ ಧಾವಿಸಿದ್ದಾರೆ. ತೀವ್ರ ಆಯಾಸದಿಂದ ಕುಸಿದುಬಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ಈ ಘಟನೆ, ಸಂಘರ್ಷ ಪೀಡಿತ ಪ್ರದೇಶಗಳಿಂದ ಜನರು ಜೀವ ಉಳಿಸಿಕೊಳ್ಳಲು ಕೈಗೊಳ್ಳುವ ಹತಾಶ ಮತ್ತು ಅಪಾಯಕಾರಿ ಪ್ರಯಾಣಗಳನ್ನು ನೆನಪಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಜ್ಞರ ಅಚ್ಚರಿ: ‘ಬದುಕುಳಿಯುವುದು ಅಸಾಧ್ಯ’ :
ಹಿರಿಯ ವೈಮಾನಿಕ ತಜ್ಞರೊಬ್ಬರ ಪ್ರಕಾರ, ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು ಪ್ರಯಾಣಿಸುವುದು ‘ಬಹುತೇಕ ಅಸಾಧ್ಯ’. ಸಮುದ್ರ ಮಟ್ಟದಿಂದ 30,000 ಅಡಿಗೂ ಎತ್ತರದಲ್ಲಿ, ತಾಪಮಾನವು ಮೈನಸ್ 40 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುತ್ತದೆ ಮತ್ತು ಆಮ್ಲಜನಕದ ಪ್ರಮಾಣ ತೀವ್ರವಾಗಿ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಈ ಬಾಲಕ ಬದುಕುಳಿದಿರುವುದು ನಿಜಕ್ಕೂ ಒಂದು ಪವಾಡ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.























