ನವದೆಹಲಿ, ಸೆ.24 www.bengaluruwire.com : ದಸರಾ ಹಬ್ಬದ ಸಂದರ್ಭದಲ್ಲಿ, ಶಬರಿಮಲೆಗೆ ತೆರಳುವ ರಾಜ್ಯದ ಅಯ್ಯಪ್ಪ ಭಕ್ತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಹುಬ್ಬಳ್ಳಿ-ಕೊಲ್ಲಂ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಲು ಒಪ್ಪಿಗೆ ನೀಡಿದ್ದು, ಇದು ಭಕ್ತರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಯತ್ನಗಳ ಫಲವಾಗಿ, 22 ಕೋಚ್‌ಗಳುಳ್ಳ ಈ ವಿಶೇಷ ರೈಲು ಸೇವೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಈ ಸೇವೆ ಸೆಪ್ಟೆಂಬರ್ 28 ರಿಂದ ಆರಂಭವಾಗಲಿದ್ದು, 14 ವಾರಗಳ ಕಾಲ ಹುಬ್ಬಳ್ಳಿ ಮತ್ತು ಕೊಲ್ಲಂ ನಡುವೆ ಸಂಚರಿಸಲಿದೆ. ಈ ರೈಲು, ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಮತ್ತು ಬೆಂಗಳೂರು ಮಾರ್ಗವಾಗಿ ಸಾಗಲಿದೆ.
ಈ ವಿಶೇಷ ರೈಲಿನಿಂದಾಗಿ, ಉತ್ತರ ಕರ್ನಾಟಕದ ಯಾತ್ರಾರ್ಥಿಗಳಿಗೆ ನೇರ ಸಂಪರ್ಕ ಲಭ್ಯವಾಗಲಿದೆ. ರೈಲು ಸಂಖ್ಯೆ 07313 ಸೆಪ್ಟೆಂಬರ್ 28 ರಿಂದ ಪ್ರತಿ ಭಾನುವಾರ ಮಧ್ಯಾಹ್ನ 3:15 ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ರೈಲು ಸಂಖ್ಯೆ 07314 ಸೆಪ್ಟೆಂಬರ್ 29 ರಿಂದ ಪ್ರತಿ ಸೋಮವಾರ ಸಂಜೆ 5:00 ಗಂಟೆಗೆ ಕೊಲ್ಲಂನಿಂದ ಹೊರಡಲಿದೆ.
ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟ್, ಸೇಲಂ, ಇರೋಡ್, ತಿರುಪುರ, ಪೊದನೂರ, ತ್ರಿಸ್ಸೂರ, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಯಂ, ಚಂಗನಸ್ಸೇರಿ, ತಿರುವಳ್ಳಾ, ಚೆಂಗನ್ನೂರ್, ಕರುನಾಗಪಲ್ಲಿ, ಮತ್ತು ಸಸ್ಥನಕೊಟ್ಟಾ ಮಾರ್ಗವಾಗಿ ಸಂಚರಿಸಲಿದೆ.

ಭಾರತೀಯ ಅಯ್ಯಪ್ಪ ಸೇವಾ ಸಂಘವು ಈ ವಿಶೇಷ ರೈಲು ಸೇವೆಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ, ಸಚಿವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿ, ಈ ರೈಲು ಸೇವೆಗೆ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಯತ್ನಕ್ಕೆ, ಭಾರತೀಯ ಅಯ್ಯಪ್ಪ ಸೇವಾ ಸಂಘವು ಸಚಿವರಾದ ಜೋಶಿ ಮತ್ತು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದೆ.























