ಬೆಂಗಳೂರು, ಸೆ.23 www.bengaluruwire.com : 2025ರ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕವನ್ನು ಪರಿಶೀಲಿಸಲು ಕರ್ನಾಟಕ ವಿಧಾನಸಭೆಯು ಪರಿಶೀಲನಾ ಸಮಿತಿಯನ್ನು ರಚಿಸಿದೆ.
ಈ ಸಮಿತಿಗೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿಧೇಯಕದ ಬಗ್ಗೆ ಅನೇಕ ಸದಸ್ಯರುಗಳು ವ್ಯಕ್ತಪಡಿಸಿದ ಕಳವಳ ಮತ್ತು ಸಮಗ್ರ ಪರಿಶೀಲನೆಯ ಬೇಡಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಸಮಿತಿಯಲ್ಲಿ ಒಟ್ಟು 11 ಸದಸ್ಯರಿದ್ದು, ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಶಾಸಕರಾದ ರಿಜ್ವಾನ್ ಅರ್ಷದ್, ಶ್ರೀನಿವಾಸಯ್ಯ ಎನ್., ರವಿಶಂಕರ್ ಡಿ., ಶ್ರೀನಿವಾಸ್ ವಿ. ಮಾನೆ, ಪ್ರಕಾಶ್ ಕೆ. ಕೋಳಿವಾಡ್, ಹೆಚ್.ಡಿ. ತಮ್ಮಯ್ಯ, ವಿ. ಸುನಿಲ್ ಕುಮಾರ್, ಎಸ್. ವಿಶ್ವನಾಥ್ ಮತ್ತು ಜಿ.ಡಿ.ಹರೀಶ್ ಗೌಡ ಅವರು ಸದಸ್ಯರಾಗಿದ್ದಾರೆ.
ಸಮಿತಿಯು ಮೂರು ತಿಂಗಳ ಅವಧಿಯೊಳಗೆ ವಿಧೇಯಕದ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕಿದೆ. ಈ ಸಂಬಂಧ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಈ ವಿಧೇಯಕವು 16ನೇ ವಿಧಾನಸಭೆಯ 7ನೇ ಅಧಿವೇಶನದಲ್ಲಿ ಆಗಸ್ಟ್ 21 2025 ಪರ್ಯಾಲೋಚನೆಗೆ ಬಂದಿತ್ತು.























