ಬೆಂಗಳೂರು, ಸೆ.23 www.bengaluruwire.com : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ.ಜಿ ಅವರು ತಿಳಿಸಿದ್ದಾರೆ.
ಮನೆ ಮನೆಯ ಸಮೀಕ್ಷೆ ನಡೆಸಲು ಸಮೀಕ್ಷಾದಾರರು/ಗಣತಿದಾರರನ್ನು ಆಯಾ ಬ್ಲಾಕ್ ಗಳಿಗೆ ಈಗಾಗಲೇ ನಿಯೋಜಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 12,43,000 ಕುಟುಂಬಗಳ ಸಮೀಕ್ಷೆಯು ಪ್ರಾರಂಭವಾಗಿದೆ ಎಂದು ಅವರು ತಿಳಿಸಿದರು.
ಈ ಸಮೀಕ್ಷೆಯ ಮುನ್ನ ಬೆಸ್ಕಾಂ ವಿದ್ಯುತ್ ಮೀಟರ್ ರೀಡರ್ಗಳ ಆರ್.ಆರ್.ನಂ ಮೂಲಕ ಮನೆಮನೆಗಳಿಗೆ ಭೇಟಿ ನೀಡಿ Geo taging ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಮನೆಗಳ ಪಟ್ಟಿಯ ಮಾಹಿತಿಯನ್ನು ಇಡಿಸಿಎಸ್ ಸರ್ವರ್ ಗಳಲ್ಲಿ ಅಪಲೋಡ್ ಮಾಡಲಾಗಿದೆ.
ಈ ಆಪ್ ನಲ್ಲಿ ಕಾಲೋನಿಗಳು, ಅಪಾರೆಟ್ ಮೆಂಟ್ ಗಳು ಹಾಗೂ ವಾಸಸ್ಥಳಗಳನ್ನು ಗುರುತಿಸಲಾಗಿದ್ದು ಗಣತಿದಾರರು / ಸಮೀಕ್ಷಾದಾರರು ಪ್ರತಿ ಮನೆಗೆ ಭೇಟಿ ನೀಡಿ ಯುಎಚ್ಐಡಿ (UHID) ಸ್ಟಿಕ್ಕರ್ ಗಳನ್ನು ಈಗಾಗಲೇ ಆಂಟಿಸಿರುತ್ತಾರೆ ಎಂದು ಅವರು ತಿಳಿಸಿದರು. .

ಈ ಸಮೀಕ್ಷೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಹಿಂದುಳಿದ ವರ್ಗಗಳ ಹಾಗೂ ಇತರೆ ಎಲ್ಲ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ದತ್ತಾಂಶವನ್ನು ಸಂಗ್ರಹಿಸಲು ಈ ಯೋಜನೆ ಸಹಕರಿಯಾಗಲಿದೆ.
ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸಲು ಯೋಜನೆಗಳನ್ನು ರೂಪಿಸಲು ಈ ದತ್ತಾಂಶ ಸಹಕರಿಯಾಗಲಿದೆ ಎಂದು ಅವರು ತಿಳಿಸಿದರು.
ಸಮೀಕ್ಷೆಯು 60 ಪ್ರಶ್ನಾವಳಿಗಳನ್ನು ಹೊಂದಿದ್ದು, ಸಾರ್ವಜನಿಕರು ಈ ಸಮೀಕ್ಷೆಯಲ್ಲಿ ಭಾಗಿಯಾಗಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.






















