ಬೆಂಗಳೂರು, ಸೆ.23 www.bengaluruwire.com : ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಪೌರಕಾರ್ಮಿಕರು, ಆಟೋ ಸಹಾಯಕರು, ಕಾಂಪ್ಯಾಕ್ಟರ್ ಲೋಡರ್ಗಳು ಮತ್ತು ಚಾಲಕರು ಮುಂದಿನ ಒಂದು ವರ್ಷದ ಅವಧಿಗೆ ಮುಷ್ಕರ ಹೂಡುವುದನ್ನು ಸರ್ಕಾರವು ನಿಷೇಧಿಸಿದೆ.
ಇನ್ನೊಂದೆಡೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯೂಎಂಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಸೇವಾದಾರರ ಸಂಘದ ಜೊತೆ ಮಂಗಳವಾರ ಸಭೆ ನಡೆಸಿದರು. ಸಭೆಯಲ್ಲಿ, ನೌಕರರ ವಿವಿಧ ಬೇಡಿಕೆಗಳನ್ನು ಕುರಿತು ಚರ್ಚಿಸಲಾಯಿತು ಮತ್ತು ಇದಕ್ಕೆ ಪರಿಹಾರ ನೀಡುವ ಬಗ್ಗೆ ಬಿಎಸ್‌ಡಬ್ಲ್ಯೂಎಂಎಲ್ ಭರವಸೆ ನೀಡಿತು.
ಇಂದಿನ ಸಭೆಯ ಪ್ರಮುಖಾಂಶಗಳು:
* ಮುಷ್ಕರ ಹಿಂತೆಗೆತ: ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳು ಮುಷ್ಕರವನ್ನು ಕೈಬಿಡುವಂತೆ ಸೇವಾದಾರರ ಸಂಘದ ಪದಾಧಿಕಾರಿಗಳಲ್ಲಿ ವಿನಂತಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಘವು ಮುಷ್ಕರವನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿತು.

* ಬಾಕಿ ಬಿಲ್‌ಗಳ ಪಾವತಿ: ಸೇವಾ ಪೂರೈಕೆದಾರರಿಗೆ ಬಾಕಿ ಇರುವ ಬಿಲ್‌ಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಪಾವತಿಸಲಾಗುವುದು ಎಂದು ಬಿಎಸ್‌ಡಬ್ಲ್ಯೂಎಂಎಲ್ ಭರವಸೆ ನೀಡಿದೆ.
* ನಿಯಮಿತ ಸಭೆಗಳು: ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಪ್ರತಿ ತಿಂಗಳು ಸೇವಾ ಪೂರೈಕೆದಾರರೊಂದಿಗೆ ಸಭೆ ನಡೆಸಲಾಗುವುದು ಎಂದು ಬಿಎಸ್‌ಡಬ್ಲ್ಯೂಎಂಎಲ್ ತಿಳಿಸಿದೆ.
* ಇತರೆ ಬೇಡಿಕೆಗಳ ಪರಿಶೀಲನೆ: ಇಎಸ್‌ಐ ಮತ್ತು ಪಿಎಫ್ ಬಾಕಿ ಸೇರಿದಂತೆ ಇತರೆ ಎಲ್ಲಾ ಬೇಡಿಕೆಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಿ, ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಸ್‌ಡಬ್ಲ್ಯೂಎಂಎಲ್ ಮುಖ್ಯಸ್ಥರು ಭರವಸೆ ನೀಡಿದ್ದಾರೆ.
* ಸರಳೀಕೃತ ಪಾವತಿ ವ್ಯವಸ್ಥೆ: ಬಿಲ್ ಪಾವತಿಯ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಿಸುವ ಮೂಲಕ ಸೇವಾ ಪೂರೈಕೆದಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಈ ಸಭೆಯಲ್ಲಿ, ಬಿಎಸ್‌ಡಬ್ಲ್ಯೂಎಂಎಲ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಆರ್ಥಿಕಾಧಿಕಾರಿ ರಾಜು, ಸೇವಾದಾರರ ಸಂಘದ ಪದಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.






















