ಬೆಂಗಳೂರು, ಸೆ.22 www.bengaluruwire.com : ವಿಶಾಖಪಟ್ಟಣಂದಲ್ಲಿ ಇಂದು (ಸೆಪ್ಟೆಂಬರ್ 22) ನಡೆದ ಪ್ರತಿಷ್ಠಿತ 28ನೇ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮಹತ್ವಾಕಾಂಕ್ಷಿ ಇ-ಖಾತಾ ಯೋಜನೆಗೆ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ 2025’ ನೀಡಿ ಗೌರವಿಸಲಾಗಿದೆ.
ಕೇಂದ್ರ ಸರ್ಕಾರದ ವತಿಯಿಂದ ಈ ಗೌರವವನ್ನು ಪ್ರದಾನ ಮಾಡಲಾಗಿದ್ದು, ಬೆಂಗಳೂರಿನ ಡಿಜಿಟಲ್ ಆಡಳಿತದ ದಿಕ್ಕಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸಾದ ಈ ಇ-ಖಾತಾ ಯೋಜನೆಯು, ಆಸ್ತಿ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಾತ್ರಿಪಡಿಸಿದೆ.
ನಾಗರಿಕ ಸೇವಾ ವಿತರಣೆಯನ್ನು ಸುಗಮಗೊಳಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ ಎಂದು ತೀರ್ಪುಗಾರರು ಶ್ಲಾಘಿಸಿದ್ದಾರೆ. ಈ ಯೋಜನೆ ಕೇವಲ ತಾಂತ್ರಿಕ ಪ್ರಗತಿಯಲ್ಲದೆ, ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ತಂದಿರುವುದಕ್ಕಾಗಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ.


ಕೇಂದ್ರ ಸಚಿವ ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿಯೊಂದಿಗೆ, ಬಿಬಿಎಂಪಿಗೆ 10 ಲಕ್ಷ ರೂ.ಗಳ ನಗದು ಬಹುಮಾನವನ್ನೂ ಸಹ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದ್ದು, ಈ ಗೌರವವು ಇಡೀ ಬೆಂಗಳೂರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಬಣ್ಣಿಸಿದೆ.
ಬಿಬಿಎಂಪಿಯ ಇ-ಖಾತಾ ತಂಡದ ಶ್ರಮಕ್ಕೆ ಸಿಕ್ಕಿರುವ ಈ ದೊಡ್ಡ ಗೌರವವನ್ನು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಜಂಟಿ ಆಯುಕ್ತರಾದ ಲಕ್ಷ್ಮೀದೇವಿ, ಹಾಗೂ ಎನ್.ಐ.ಸಿ.ಯ ಹಿರಿಯ ತಾಂತ್ರಿಕ ನಿರ್ದೇಶಕ ಸುರೇಶ್ ಬಾಬು ಅವರು ಇ-ಖಾತಾ ತಂಡದೊಂದಿಗೆ ಸೇರಿ ಸ್ವೀಕರಿಸಿದರು. ಈ ತಂಡದ ಸಂಘಟಿತ ಪ್ರಯತ್ನ ಮತ್ತು ಕಠಿಣ ಪರಿಶ್ರಮವೇ ಈ ಮಹೋನ್ನತ ಗೌರವಕ್ಕೆ ಕಾರಣವಾಗಿದೆ.
ಇ-ಖಾತಾ ಯೋಜನೆಯು ನಾಗರಿಕರಿಗೆ ಖಾತಾ ಸಂಬಂಧಿತ ಸೇವೆಗಳನ್ನು ಪಡೆಯಲು ಕಚೇರಿಗೆ ಅಲೆಯುವ ತೊಂದರೆಯನ್ನು ತಪ್ಪಿಸಿದೆ. ಸಂಪೂರ್ಣ ಆನ್ಲೈನ್ ಪ್ರಕ್ರಿಯೆಯಿಂದಾಗಿ, ದಾಖಲಾತಿ ಪ್ರಕ್ರಿಯೆ ವೇಗವಾಗಿದ್ದು, ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗಿದೆ. ಭ್ರಷ್ಟಾಚಾರದ ಸಾಧ್ಯತೆಗಳನ್ನು ಗಣನೀಯವಾಗಿ ತಗ್ಗಿಸಿ, ಸಾರ್ವಜನಿಕರಿಗೆ ನೇರ ಮತ್ತು ಪಾರದರ್ಶಕ ಸೇವೆ ಒದಗಿಸುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ.
ಬೆಂಗಳೂರು ನಗರ ಆಡಳಿತವು ಡಿಜಿಟಲ್ ಆಡಳಿತದ (Digital Governance) ಹೊಸ ಮಾದರಿಗಳನ್ನು ರೂಪಿಸುತ್ತಿದ್ದು, ಈ ಪ್ರಶಸ್ತಿ ಈ ದಿಕ್ಕಿನಲ್ಲಿನ ಒಂದು ಮೈಲುಗಲ್ಲಾಗಿದೆ. ಇ-ಖಾತಾ ಯೋಜನೆಯ ಯಶಸ್ಸು ಇತರೆ ರಾಜ್ಯಗಳಿಗೂ ಒಂದು ಉತ್ತಮ ಮಾದರಿಯಾಗಿದೆ. ಇದು ಇ-ಆಡಳಿತ (e-Governance) ಕ್ಷೇತ್ರದಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.























