ಬೆಂಗಳೂರು, ಸೆ.21 www.bengaluruwire.com : ಮೈಸೂರು ದಸರಾ-2025 ಮತ್ತು ದಸರಾ ರಜೆಗಳ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC- ಕೆಎಸ್) ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 26, 27 ಮತ್ತು 30 ರಂದು ರಾಜ್ಯ ಮತ್ತು ಹೊರರಾಜ್ಯಗಳ ವಿವಿಧ ಸ್ಥಳಗಳಿಗೆ 2300 ಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ.
ಈ ಬಸ್ಸುಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ಹೊರಡಲಿವೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ ರಾಜ್ಯದ ಮತ್ತು ಹೊರರಾಜ್ಯಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 2 ಮತ್ತು 5ರಂದು ರಾಜ್ಯ ಮತ್ತು ಹೊರರಾಜ್ಯಗಳ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ಸುಗಳನ್ನು ಸಹ ಓಡಿಸಲಾಗುವುದು. ಪ್ರಸ್ತುತ ಕಾರ್ಯಾಚರಣೆಯಲ್ಲಿದ್ದ ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಹಾಗೂ ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ವೀಪರ್, ಅಶ್ವಮೇಧ ಸೇವೆಗಳ ಜೊತೆಗೆ ಈ ವಿಶೇಷ ಬಸ್ಸುಗಳ ಸೇವೆಗಳನ್ನು ಒದಗಿಸಲಾಗುತ್ತಿದೆ.
ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಸಾರಿಗೆ:

ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು, ಮತ್ತು ನೆರೆಯ ರಾಜ್ಯಗಳಾದ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲ್ಘಾಟ್ ಮತ್ತು ಇತರ ಸ್ಥಳಗಳಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ದಸರಾ ಪ್ರಯುಕ್ತ 610 ವಿಶೇಷ ಬಸ್ಸುಗಳು:
ಮೈಸೂರು ದಸರಾ-2025 ಕ್ಕಾಗಿ, 610 ವಿಶೇಷ ಬಸ್ಸುಗಳನ್ನು ಯೋಜಿಸಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ 260 ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆ ಮಾಡಲಿವೆ. ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಾದ ಚಾಮುಂಡಿ ಬೆಟ್ಟ, ಕೆಆರ್‌ಎಸ್ ಅಣೆಕಟ್ಟು, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಮುಂತಾದ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 350 ಹೆಚ್ಚುವರಿ ಬಸ್ಸುಗಳನ್ನು ಒದಗಿಸಲಾಗಿದೆ. ಇದಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ‘ಫ್ಲೈ ಬಸ್’ (Fly Bus) ಮೂಲಕ ನೇರ ಸಾರಿಗೆ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ವಿಶೇಷ ಪ್ಯಾಕೇಜ್ ಪ್ರವಾಸಗಳು:
ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಕರ್ನಾಟಕ ಸಾರಿಗೆ ವಾಹನಗಳಿಂದ ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸಿದೆ:
* ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ವಯಸ್ಕರಿಗೆ ರೂ. 450/-, ಮಕ್ಕಳಿಗೆ ರೂ. 300/-).
* ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್‌ಎಸ್ (ವಯಸ್ಕರಿಗೆ ರೂ. 500/-, ಮಕ್ಕಳಿಗೆ ರೂ. 350/-).
* ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ವಯಸ್ಕರಿಗೆ ರೂ. 330/-, ಮಕ್ಕಳಿಗೆ ರೂ. 225/-).
ಈ ಪ್ಯಾಕೇಜ್ ಸೇವೆಗಳು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 7, 2025 ರವರೆಗೆ ಲಭ್ಯವಿರುತ್ತವೆ. ಈ ಪ್ರವಾಸಗಳು ಬೆಳಿಗ್ಗೆ ಮೈಸೂರಿನಿಂದ ಪ್ರಾರಂಭವಾಗಿ ಸಂಜೆ ಮೈಸೂರಿಗೆ ಹಿಂದಿರುಗುತ್ತವೆ.
ಟಿಕೆಟ್ ಬುಕಿಂಗ್ ಮತ್ತು ರಿಯಾಯಿತಿಗಳು:
ಪ್ರಯಾಣಿಕರು www.ksrtc.karnataka.gov.in ವೆಬ್‌ಸೈಟ್ ಅಥವಾ ಮೊಬೈಲ್ ಮೂಲಕ ಇ-ಟಿಕೆಟ್ ಬುಕಿಂಗ್ ಮಾಡಬಹುದು. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪುದುಚೇರಿಯಲ್ಲಿರುವ ಮುಂಗಡ ಟಿಕೆಟ್ ಕೌಂಟರ್‌ಗಳ ಮೂಲಕವೂ ಬುಕ್ ಮಾಡಬಹುದು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಿಗೆ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5 ರಷ್ಟು ರಿಯಾಯಿತಿ ದೊರೆಯುತ್ತದೆ. ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಬರುವ ಪ್ರಯಾಣದ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಪ್ರಯಾಣಿಕರ ಗಮನಕ್ಕೆ:
ಮೈಸೂರು ಗ್ರಾಮೀಣ ಮತ್ತು ನಗರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ‘ಮಾಹಿತಿ ಕೇಂದ್ರ’ಗಳನ್ನು ತೆರೆಯಲಾಗುವುದು. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವಾಗ ಟಿಕೆಟ್‌ನಲ್ಲಿ ನಮೂದಿಸಲಾದ ಬಸ್ ನಿಲ್ದಾಣ ಅಥವಾ ಪಿಕ್‌ಅಪ್ ಪಾಯಿಂಟ್ ಅನ್ನು ಗಮನಿಸುವಂತೆ ಕೋರಲಾಗಿದೆ. ಸಂಚಾರ ಒತ್ತಡಕ್ಕನುಗುಣವಾಗಿ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಬಸ್ ನಿಲ್ದಾಣಗಳಿಂದಲೂ ವಿಶೇಷ ಸಾರಿಗೆಗಳನ್ನು ಓಡಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.






















