ಕೋಟ (ಉಡುಪಿ), ಸೆ.20 www.bengaluruwire.com : ಜಗತ್ತಿನಾದ್ಯಂತ ಇಂದು ಪ್ಲಾಸ್ಟಿಕ್ ತ್ಯಾಜ್ಯವು ಪರಿಸರ ಮತ್ತು ಜೀವ ಸಂಕುಲಕ್ಕೆ ಗಂಭೀರವಾದ ಅಪಾಯವನ್ನುಂಟು ಮಾಡುತ್ತಿದೆ. ಕೇವಲ ಜಲಚರಗಳಿಗಷ್ಟೇ ಅಲ್ಲದೆ, ಇದು ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗುವುದು ಅತ್ಯವಶ್ಯಕ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶನಿವಾರ ಅಂತರರಾಷ್ಟ್ರೀಯ ಸಮುದ್ರ ತೀರ ಸ್ವಚ್ಛತಾ ದಿನದ ಅಂಗವಾಗಿ ಕೋಟದ ಮಣೂರು ಪಡುಕೆರೆ ಬೀಚ್‌ನಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. “ಸಮುದ್ರದ ತಟದಲ್ಲಿನ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯಗಳು ಸಂಗ್ರಹವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಮಾನವನ ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾನೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಮುಖ್ಯ,” ಎಂದು ಅವರು ಪ್ರತಿಪಾದಿಸಿದರು.

ಈ ಕಾರ್ಯಕ್ರಮವನ್ನು ಜಿಲ್ಲಾಡಳಿತದ ನಿರ್ದೇಶನದಂತೆ ಕೋಟ ಗ್ರಾಮ ಪಂಚಾಯತ್, ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ, ಗೀತಾನಂದ ಫೌಂಡೇಶನ್ ಮಣೂರು, ಆಶ್ರಿತಾ ಶಿಕ್ಷಣ ಸಮೂಹ ಸಂಸ್ಥೆಗಳು, ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ಮತ್ತು ಜೆಸಿಐ ಕೋಟ ಸೀನಿಯರ್ ಲಿಜನ್ ಜಂಟಿಯಾಗಿ ಆಯೋಜಿಸಿದ್ದವು.
ಕಾರ್ಯಕ್ರಮದಲ್ಲಿ ಪಂಚವರ್ಣ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಪರಿಸರ ಜಾಗೃತಿ ಪ್ರತಿಜ್ಞಾವಿಧಿ ಬೋಧಿಸಿದರು. ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ್ ಸಿ. ಕುಂದರ್ ಅವರು ಸ್ವಚ್ಛತೆಯ ಸಂದೇಶ ನೀಡಿದರು.

ವೇದಿಕೆಯಲ್ಲಿ ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಜನತಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಶ್ರೀನಿವಾಸ ಕುಂದರ್, ಮತ್ತು ಅನೇಕ ಸ್ಥಳೀಯ ನಾಯಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಲೆಕ್ಕಾಧಿಕಾರಿ ಶೇಖರ್ ಮರವಂತೆ ಸ್ವಾಗತಿಸಿದರು, ಪಂಚವರ್ಣದ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಹಾಗೂ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.






















