ಬೆಂಗಳೂರು, ಸೆ.17 www.bengaluruwire.com : ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟುಮಾಡಿದ್ದ ತುರ್ತು ನಿರ್ವಹಣಾ ಕಾಮಗಾರಿ ನಿಗದಿತ ಅವಧಿಗೂ ಮುನ್ನವೇ ಪೂರ್ಣಗೊಂಡಿದ್ದು, ಇಂದಿನಿಂದಲೇ (ಸೆಪ್ಟೆಂಬರ್ 17) ನಗರದ ಹಲವು ಪ್ರದೇಶಗಳಿಗೆ ನೀರು ಸರಬರಾಜು ಪುನರಾರಂಭಗೊಂಡಿದೆ.
ಬೆಂಗಳೂರು ಜಲಮಂಡಳಿ (BWSSB) ಸಿಬ್ಬಂದಿಯ ಹಗಲು ರಾತ್ರಿ ಶ್ರಮದ ಫಲವಾಗಿ, ಬುಧವಾರಕ್ಕೆ ನಿಗದಿಯಾಗಿದ್ದ ಕಾಮಗಾರಿ ಮಂಗಳವಾರವೇ ಮುಕ್ತಾಯಗೊಂಡಿದೆ. ಹೀಗಾಗಿ ಬುಧವಾರ ಬೆಳಗ್ಗೆಯಿಂದಲೇ ನೀರು ಪೂರೈಕೆಯಾಗುತ್ತಿದೆ.
ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ತರುವ ಎಲ್ಲಾ ಹಂತಗಳ ನಿರ್ವಹಣಾ ಕಾಮಗಾರಿಯನ್ನು ಸೆಪ್ಟೆಂಬರ್ 15 ರಿಂದ 17 ರವರೆಗೆ ನಡೆಸಲು ಜಲಮಂಡಳಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಈಗಾಗಲೇ ಪ್ರಕಟಿಸಿತ್ತು.
ಆದರೆ, ನಿಗದಿತ ಅವಧಿಗೂ ಒಂದು ದಿನ ಮುಂಚಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ, ನಾಗರಿಕರಿಗೆ ಉಂಟಾಗಬಹುದಾಗಿದ್ದ ಅನಾನುಕೂಲತೆಯನ್ನು ತಪ್ಪಿಸುವಲ್ಲಿ ಜಲಮಂಡಳಿ ಯಶಸ್ವಿಯಾಗಿದೆ.

ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದು, ಸಿಬ್ಬಂದಿಯ ಸಮಯೋಚಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಕಾವೇರಿ ನೀರು ಸರಬರಾಜು ಪುನರಾರಂಭಗೊಂಡಿರುವುದು, ನಗರದ ಜನತೆಗೆ ನೆಮ್ಮದಿ ತಂದಿದೆ.






















