ಬೆಂಗಳೂರು, ಸೆ.16 www.bengaluruwire.com : ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 (ಯುಕೆಪಿ-3) ಕ್ಕೆ ಕೊನೆಗೂ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಬುಧವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ, ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡಲು ನಿರ್ಧರಿಸಲಾಗಿದೆ. ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಳಂಬವಾಗಿದ್ದ ಯೋಜನೆಗೆ ಮರುಜೀವ ನೀಡಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಈ ತೀರ್ಮಾನಗಳನ್ನು ಪ್ರಕಟಿಸಿದರು. ಅದರಂತೆ, ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಮತ್ತು ಒಣಭೂಮಿಗೆ ಎಕರೆಗೆ ₹30 ಲಕ್ಷ ಪರಿಹಾರವನ್ನು ನೀಡಲಾಗುವುದು. ಅಲ್ಲದೆ, ಕಾಲುವೆ ತೋಡಲು ಸುಮಾರು 51,837 ಎಕರೆ ಅವಶ್ಯಕತೆಯಿದ್ದು ಇದರಲ್ಲಿ 23,631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಗೆ ₹30 ಲಕ್ಷ ಮತ್ತು ಒಣಭೂಮಿಗೆ ಎಕರೆಗೆ ₹25 ಲಕ್ಷ ಪರಿಹಾರ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ಪರಿಹಾರದ ಮೊತ್ತವನ್ನು ಮೂರು ಆರ್ಥಿಕ ವರ್ಷಗಳಲ್ಲಿ ಪಾವತಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಮುಳುಗಡೆ ಪ್ರದೇಶ ಮತ್ತು ವೆಚ್ಚದ ಅಂದಾಜು :
ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ.ಗೆ ಏರಿಸುವುದರಿಂದ ಸುಮಾರು 75,000 ಎಕರೆಗೂ ಹೆಚ್ಚು ಭೂಮಿ ಮುಳುಗಡೆಯಾಗಲಿದೆ. ಈ ಯೋಜನೆಯಿಂದ ಸುಮಾರು 14 ರಿಂದ 15 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಯೋಜನೆಗೆ ಒಟ್ಟಾರೆ ₹70,000 ಕೋಟಿ ವೆಚ್ಚವಾಗುವ ಅಂದಾಜಿದೆ. ಇದಕ್ಕಾಗಿ ಪ್ರತಿ ವರ್ಷ ₹15,000 ದಿಂದ ₹20,000 ಕೋಟಿಗಳನ್ನು ಮೀಸಲಿಡಲಾಗುವುದು. ಒಟ್ಟು 1,33,867 ಎಕರೆ ಭೂಮಿ ಈ ಯೋಜನೆಗೆ ಅಗತ್ಯವಿದೆ.

ಬಿಜೆಪಿ ಸರ್ಕಾರದ ವಿರುದ್ಧ ಆರೋಪ :
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯುಕೆಪಿ-3 ಯೋಜನೆ ನೆನೆಗುದಿಗೆ ಬಿದ್ದಿತ್ತು ಎಂದು ಸಿದ್ದರಾಮಯ್ಯ ಆರೋಪಿಸಿದರು. “ಪರಿಹಾರದ ಮೊತ್ತ ಕಡಿಮೆ ಇದ್ದ ಕಾರಣ ರೈತರು ಭೂಮಿ ನೀಡಲು ಒಪ್ಪಿರಲಿಲ್ಲ. ಆದರೆ ನಮ್ಮ ಸರ್ಕಾರ ರೈತರ ಪರವಾಗಿದೆ ಮತ್ತು ನುಡಿದಂತೆ ನಡೆಯುತ್ತದೆ” ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ಯೋಜನೆಯ ಕುರಿತು ಅಧಿಸೂಚನೆ ಹೊರಡಿಸದಿದ್ದರೂ, ಕಾಲುವೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಈ ತೀರ್ಮಾನವು ಉತ್ತರ ಕರ್ನಾಟಕದ ರೈತರ ಜೀವನಮಟ್ಟ ಸುಧಾರಣೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ.






















