ಬೆಂಗಳೂರು, ಸೆ.16 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ನಾಗರಿಕ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳ ಆಯುಕ್ತರು ಪ್ರತ್ಯೇಕವಾಗಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ಅವರು ಸುಂಕೆನಹಳ್ಳಿ ವಾರ್ಡ್ ಅನ್ನು ಮಾದರಿ ವಾರ್ಡ್ ಆಗಿ ಅಭಿವೃದ್ಧಿಪಡಿಸಲು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರೆ, ಪಶ್ಚಿಮ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸೇವೆಗಳ ಗುಣಮಟ್ಟ ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದಾರೆ.
ಮಾದರಿ ವಾರ್ಡ್‌ಗೆ ಕಾರ್ಯಸಾಧ್ಯತಾ ವರದಿ :
ಗಾಂಧಿ ಬಜಾರ್ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಕೇಂದ್ರ ಪಾಲಿಕೆ ಆಯುಕ್ತ ಶ್ರೀ ರಾಜೇಂದ್ರ ಚೋಳನ್, ಸುಂಕೆನಹಳ್ಳಿ ವಾರ್ಡ್ ಅನ್ನು ಮಾದರಿ ವಾರ್ಡ್ ಆಗಿ ಪರಿವರ್ತಿಸಲು ಕಾರ್ಯ ಯೋಜನೆ (ಆಕ್ಷನ್ ಪ್ಲಾನ್) ಸಿದ್ಧಪಡಿಸುವಂತೆ ಸೂಚಿಸಿದರು. ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ವೈಜ್ಞಾನಿಕ ವಿನ್ಯಾಸದಲ್ಲಿ ಪಾದಚಾರಿ ಮಾರ್ಗಗಳ ನಿರ್ಮಾಣ, ಅನಧಿಕೃತ ಕೇಬಲ್ ತೆರವು ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ವ್ಯಾಪಾರಸ್ಥರಿಗೆ ಅರಿವು ಮೂಡಿಸುವುದು ಈ ಯೋಜನೆಯಲ್ಲಿ ಸೇರಿವೆ. ಜೊತೆಗೆ, ಪಾದಚಾರಿ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳಗಳನ್ನು ನಿಗದಿಪಡಿಸುವುದು ಮತ್ತು ರಸ್ತೆಗಳ ಬದಿ ಸಸಿಗಳನ್ನು ನೆಟ್ಟು ಹಸಿರೀಕರಣಗೊಳಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದರು.
ಗಾಂಧಿ ಬಜಾರ್‌ನಲ್ಲಿ ಸುಧಾರಣೆಗಳು :

ಗಾಂಧಿ ಬಜಾರ್ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಈಗಾಗಲೇ ಸ್ಥಳ ನಿಗದಿಪಡಿಸಲಾಗಿದ್ದು, ನಿಗದಿಪಡಿಸಿದ ಸ್ಥಳದಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಸೂಚಿಸಲಾಯಿತು. ಹೆಚ್ಚುವರಿ ಒತ್ತುವರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಆಯುಕ್ತರು, ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ತಡೆಯಲು ಕ್ರಮ ವಹಿಸುವಂತೆಯೂ ತಿಳಿಸಿದರು.
ವಾರಕ್ಕೊಮ್ಮೆ ವಾಕಥಾನ್ ಮತ್ತು ತಿಂಗಳಿಗೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಂಧಿ ಬಜಾರ್ ರಸ್ತೆಯಲ್ಲಿ ಆಯೋಜಿಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುವಂತೆ ಆಯುಕ್ತರು ನಿರ್ದೇಶಿಸಿದರು. ಈ ಮೂಲಕ ರಸ್ತೆಯನ್ನು ಒಂದು ದಿನ ವಾಹನ ಸಂಚಾರ ಮುಕ್ತಗೊಳಿಸಿ, ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಚಿಂತನೆ ನಡೆಯುತ್ತಿದೆ.
ಕಾರ್ ಪಾರ್ಕಿಂಗ್ ಉದ್ಘಾಟನೆಗೆ ಸಿದ್ಧತೆ
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಗಾಂಧಿ ಬಜಾರ್‌ನ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕಟ್ಟಡದಲ್ಲಿ 50 ವ್ಯಾಪಾರ ಮಳಿಗೆಗಳು ಮತ್ತು 124 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪಶ್ಚಿಮ ಪಾಲಿಕೆ ಆಯುಕ್ತರಿಂದ ಜನಸೇವೆಗಳ ಸುಧಾರಣೆಗೆ ಒತ್ತು
ಪಶ್ಚಿಮ ಬೆಂಗಳೂರಿನಲ್ಲಿ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಅವರು ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವನಗುಡಿಯ ಮಸ್ಟರಿಂಗ್ ಪಾಯಿಂಟ್‌ನಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಂತರ, ವಾರ್ಡ್ 154ರ ಪಾದಚಾರಿ ಮಾರ್ಗವನ್ನು ಪರಿಶೀಲಿಸಿದ ಆಯುಕ್ತರು, ಪಾದಚಾರಿಗಳಿಗೆ ಅಡಚಣೆಯಾಗದಂತೆ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ನಿರ್ವಹಿಸುವಂತೆ ನಿರ್ದೇಶನ ನೀಡಿದರು. ಎನ್.ಆರ್. ಕಾಲೋನಿ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ರೋಗಿಗಳೊಂದಿಗೆ ನೇರವಾಗಿ ಮಾತನಾಡಿ ಸೇವೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಕೆಂಪಾಂಬುದಿ ಕೆರೆ ಮತ್ತು ಇಂದಿರಾ ಕ್ಯಾಂಟೀನ್ ಪರಿಶೀಲನೆ
ಪರಿಸರ ಸಂರಕ್ಷಣೆಯ ಭಾಗವಾಗಿ ಕೆಂಪಾಂಬುದಿ ಕೆರೆಗೆ ಭೇಟಿ ನೀಡಿದ ಆಯುಕ್ತರು, ಕೆರೆಯ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು. ವಾರ್ಡ್ 163ರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಅಲ್ಲಿ ಆಹಾರ ಸೇವಿಸುತ್ತಿದ್ದ ಸಾರ್ವಜನಿಕರಿಂದ ಸೇವೆಗಳ ಗುಣಮಟ್ಟದ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿದರು ಮತ್ತು ಉತ್ತಮ ಸೇವೆ ಒದಗಿಸಲು ಆದೇಶಿಸಿದರು.
ಸಮೂಹ ಸ್ವಚ್ಛತಾ ಕಾರ್ಯಕ್ರಮ ಮತ್ತು ಪಶುಪಾಲನಾ ಇಲಾಖೆ ಚುರುಕು
ವಿಜಯನಗರ ವಾರ್ಡ್‌ನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ರಸ್ತೆ ಬದಿಯಲ್ಲಿನ ತ್ಯಾಜ್ಯ ಮತ್ತು ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಿ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು. ಮತ್ತೊಂದೆಡೆ, ಮಲ್ಲೇಶ್ವರಂ ವಿಭಾಗದ ಗುಟ್ಟಹಳ್ಳಿ ವಾರ್ಡ್‌ನಲ್ಲಿ ಪಶುಪಾಲನಾ ಇಲಾಖೆಯು ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಡೆಸಿತು.
ಈ ವೇಳೆ ಎರಡೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















