ನವದೆಹಲಿ, ಸೆ.15 www.bengaluruwire.com : ದೇಶದಲ್ಲಿ ಡಿಜಿಟಲ್ ಪಾವತಿಯ ಕ್ರಾಂತಿಗೆ ಕಾರಣವಾಗಿರುವ ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಇಂದಿನಿಂದ (ಸೆ.15) ಪ್ರಮುಖ ಬದಲಾವಣೆಯಾಗಿದೆ.
ಇಂದಿನಿಂದ ಜಾರಿಗೆ ಬರುವಂತೆ ಕೆಲವು ಪ್ರಮುಖ ವರ್ಗಗಳ ಯುಪಿಐ ವಹಿವಾಟುಗಳ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಒಂದೇ ದಿನದಲ್ಲಿ ₹10 ಲಕ್ಷದವರೆಗಿನ ಪಾವತಿಯನ್ನು ಸುಲಭವಾಗಿ ನಿರ್ವಹಿಸಬಹುದು.
ರಾಷ್ಟ್ರೀಯ ಪಾವತಿ ನಿಗಮ (NPCI) ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದು ಮುಖ್ಯವಾಗಿ ಬಿಸಿನೆಸ್‌ಗೆ ಸಂಬಂಧಿಸಿದ (P2M – Person-to-Merchant) ಪಾವತಿಗಳಿಗೆ ಅನ್ವಯಿಸುತ್ತದೆ. ಈ ಬದಲಾವಣೆಯು ವಿಶೇಷವಾಗಿ ದೊಡ್ಡ ಮೊತ್ತದ ಹಣಕಾಸು ವಹಿವಾಟುಗಳಾದ ಹೂಡಿಕೆ, ವಿಮೆ, ಸರ್ಕಾರಿ ಸೇವೆಗಳು ಮತ್ತು ವ್ಯಾಪಾರ ಪಾವತಿಗಳನ್ನು ಮತ್ತಷ್ಟು ಸುಗಮಗೊಳಿಸಲಿದೆ.
ವಹಿವಾಟು ಮಿತಿ ಬದಲಾವಣೆಗಳ ಪಟ್ಟಿ :

ಹೊಸ ನಿಯಮದ ಪ್ರಕಾರ, ಒಂದು ವಹಿವಾಟಿಗೆ ₹5 ಲಕ್ಷದ ಮಿತಿಯನ್ನು ನಿಗದಿಪಡಿಸಲಾಗಿದ್ದು, ಹಲವು ವರ್ಗಗಳಿಗೆ ದೈನಂದಿನ ಒಟ್ಟು ವಹಿವಾಟು ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ವೈಯಕ್ತಿಕ ವರ್ಗಾವಣೆಗೆ ಯಾವುದೇ ಬದಲಾವಣೆ ಇಲ್ಲ :
ಯುಪಿಐ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಸುವ ವೈಯಕ್ತಿಕ ಹಣ ವರ್ಗಾವಣೆಯ ದೈನಂದಿನ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಈ ಹಿಂದಿನಂತೆ ಪ್ರತಿದಿನ ₹1 ಲಕ್ಷಕ್ಕೆ ಸೀಮಿತವಾಗಿದೆ.
ಯಾಕೆ ಈ ಬದಲಾವಣೆ? :
ಡಿಜಿಟಲ್ ಪಾವತಿಗಳ ಪ್ರವರ್ತಕರ ಪ್ರಕಾರ, ಈ ಬದಲಾವಣೆಯು ದೊಡ್ಡ ಮೊತ್ತದ ಪಾವತಿಗಳನ್ನು ಸುಲಭಗೊಳಿಸಲು ಮಾಡಲಾಗಿದೆ. ಮೊದಲು, ವಿಮೆ ಪ್ರೀಮಿಯಂ ಅಥವಾ ಹೂಡಿಕೆಯಂತಹ ದೊಡ್ಡ ಮೊತ್ತವನ್ನು ಪಾವತಿಸಲು ಹಲವಾರು ಬಾರಿ ಹಣವನ್ನು ವರ್ಗಾಯಿಸಬೇಕಿತ್ತು. ಈಗ ಈ ಸಮಸ್ಯೆ ಇರುವುದಿಲ್ಲ. ಇದರಿಂದ ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಕ್ರಮವು ಡಿಜಿಟಲ್ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.






















