ಬೆಂಗಳೂರು, ಸೆ.15 www.bengaluruwire.com : ಕರ್ನಾಟಕ ವಿಧಾನ ಮಂಡಲದ ಆಗಸ್ಟ್ 2025 ರ ಅಧಿವೇಶನದಲ್ಲಿ ಒಟ್ಟು 39 ಮಸೂದೆಗಳನ್ನು ಮಂಡಿಸಲಾಗಿತ್ತು, ಆ ಪೈಕಿ 37 ಮಸೂದೆಗಳು ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕಾರಗೊಂಡಿವೆ ಎಂದು ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ ಅವರು ತಿಳಿಸಿದ್ದಾರೆ.
ಈ 39 ಮಸೂದೆಗಳ ಪೈಕಿ 2 ಮಸೂದೆಗಳನ್ನು ಜಂಟಿ ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ. ವಿಧಾನ ಮಂಡಲದ ಎರಡೂ ಸದನಗಳಲ್ಲಿ ಅಂಗೀಕರಿಸಲಾದ 37 ಮಸೂದೆಗಳಲ್ಲಿ, 32 ಮಸೂದೆಗಳಿಗೆ ರಾಜ್ಯಪಾಲರು ಈಗಾಗಲೇ ಅಂಕಿತ ನೀಡಿದ್ದಾರೆ. ಈ 32 ಮಸೂದೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
ಇವುಗಳ ಪೈಕಿ, ಒಂದೇ ದಿನ 15 ಮಸೂದೆಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿರುವುದು ಒಂದು ದಾಖಲೆಯಾಗಿದೆ. ಆಗಸ್ಟ್ 2025ರ ಅವಧಿಯ ಈ ಅಧಿವೇಶನದಲ್ಲಿ ಮಂಡನೆಯಾದ ಪ್ರಮುಖ ಮಸೂದೆಗಳಲ್ಲಿ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, ಕರ್ನಾಟಕ ಆರ್ಥಿಕ ವಿನಿಯೋಗ (ನಂ. 3) ಮಸೂದೆ ಮತ್ತು ಕರ್ನಾಟಕ ಗಿಗ್ ವರ್ಕರ್ಸ್ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025 ಸಹ ಸೇರಿವೆ.
ರಾಷ್ಟ್ರಪತಿಗಳ ಅಂಕಿತಕ್ಕೆ ಮೂರು ಮಸೂದೆಗಳು ರವಾನೆ :

ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರದ ಕಾನೂನುಗಳಿಗೆ ತಿದ್ದುಪಡಿ ತರುವ ಕಾರಣ, ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ರಾಜ್ಯಪಾಲರು ಅವುಗಳನ್ನು ಭಾರತದ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿದ್ದಾರೆ. ಇವುಗಳಲ್ಲಿ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ, ಮತ್ತು ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) (ತಿದ್ದುಪಡಿ) ಮಸೂದೆಗಳು ಸೇರಿವೆ.
ಮಸೂದೆಗಳ ಪ್ರಸ್ತುತ ಸ್ಥಿತಿಗತಿ :
* 32 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಅವುಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
* 3 ಮಸೂದೆಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ.
* 1 ಮಸೂದೆ ರಾಜ್ಯಪಾಲರ ಬಳಿ ಬಾಕಿ ಇದೆ.
* ಇನ್ನೊಂದು ಮಸೂದೆಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತಿದೆ.
* ಇದಲ್ಲದೆ, ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2025 ಮತ್ತು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2025 ಸೇರಿದಂತೆ ಇನ್ನೂ ಎರಡು ಮಸೂದೆಗಳು ಪ್ರಕ್ರಿಯೆಯಲ್ಲಿವೆ ಎಂದು ಸಚಿವ ಹೆಚ್.ಕೆ. ಪಾಟೀಲ ಅವರು ಪತ್ರಿಕಾ ಪ್ರಕಟಣೆಲ್ಲಿ ತಿಳಿಸಿದ್ದಾರೆ.






















