ಬೆಂಗಳೂರು, ಸೆ.11 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ, ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಆವೃತ್ತಿ 2.0 ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ.
ಇದರ ಜೊತೆಗೆ, ರಾಜ್ಯದ ಆರೋಗ್ಯ, ವಸತಿ ಮತ್ತು ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಒಪ್ಪಿಗೆ ದೊರೆತಿದೆ.
ಸಚಿವ ಹೆಚ್.ಕೆ. ಪಾಟೀಲ್ ಅವರು ಸಚಿವ ಸಂಪುಟದ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಅವರ ಪ್ರಕಾರ, ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

ಆರೋಗ್ಯ ಸೇವೆಗಳ ವಿಸ್ತರಣೆ: ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಯೋಜನೆಯಡಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ‘ವಯೋನಂದನ’ ಯೋಜನೆಯಡಿ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
ವಸತಿ ಯೋಜನೆ: ಅರಣ್ಯ-ಆಧಾರಿತ ಸಮುದಾಯಗಳ ವಸತಿರಹಿತ 6,856 ಕುಟುಂಬಗಳಿಗೆ ‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ ಯೋಜನೆ’ ಅಡಿಯಲ್ಲಿ ₹160 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಪ್ರತಿ ಮನೆಗೆ ₹4.50 ಲಕ್ಷ ವೆಚ್ಚವಾಗಲಿದೆ.
ಆಧುನಿಕ ಆಸ್ಪತ್ರೆಗಳ ನಿರ್ಮಾಣ: ಬೆಂಗಳೂರಿನ ಯಲಹಂಕ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ₹50 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಎರಡು ಹೊಸ ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಿಸಲು ಸಮ್ಮತಿ ನೀಡಲಾಗಿದೆ.
ತ್ಯಾಜ್ಯ ನೀರು ಶುದ್ಧೀಕರಣ ಘಟಕ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಭೈರಮಂಗಲ ಕೆರೆಯ ಬಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲು ₹391.82 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಘಟಕಗಳು 100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ಮತ್ತು 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ಶುದ್ಧೀಕರಣ ಘಟಕಗಳನ್ನು ಒಳಗೊಂಡಿವೆ.
ಇತರೆ ನಿರ್ಧಾರಗಳು: ಗೇಲ್ ಇಂಡಿಯಾ, ಕಂಪ್ರೆಸ್ಡ್ ಬಯೋ ಗ್ಯಾಸ್ ಸ್ಥಾವರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1000 ಹಾಸಿಗೆ ಹೆಚ್ಚುವರಿ ವಾರ್ಡ್‌ಗಳಿಗೆ ಉಪಕರಣ ಖರೀದಿ, ಮತ್ತು ಕಟ್ಟಡ ಹಾಗೂ ಇತರೆ ಕಾರ್ಮಿಕ ಮಂಡಳಿಯ ಸುಂಕ ಸಂಗ್ರಹಕ್ಕೆ ತಂತ್ರಾಂಶ ಅಭಿವೃದ್ಧಿಯಂತಹ ಯೋಜನೆಗಳಿಗೂ ಸಭೆಯಲ್ಲಿ ಅನುಮೋದನೆ ದೊರೆತಿದೆ. 28.11 ಕೋಟಿ ವೆಚ್ಚದಲ್ಲಿ ಟ್ರಾಕಿಂಗ್ ಆಂಡ್ ಮಾನಿಟರಿಂಗ್ ಸಾಫ್ಟ್ ವೇರ್ ಅಭಿವೃದ್ಧಿ ಮಾಡುವ ಯೋಜನೆ ಇದಾಗಿದೆ.























