ಬೆಂಗಳೂರು, ಸೆ.08 www.bengaluruwire.com : ನಗರದ ಜಿಕೆವಿಕೆ (GKVK) ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸನ್‌ರೂಫ್‌ನಿಂದ ಹೊರಗೆ ನಿಂತಿದ್ದ ಚಿಕ್ಕ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ತಂದೆಯ ನಿರ್ಲಕ್ಷ್ಯದಿಂದ ನಡೆದ ಈ ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 6 ರಂದು ಮಧ್ಯಾಹ್ನ ಸುಮಾರು 01 ಗಂಟೆ ಸಮಯದಲ್ಲಿ, KA50ME2848 ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ಕಾಂಪ್ಯಾಕ್ಟ್ ಎಸ್‌ಯುವಿ ವಾಹನವೊಂದು ಜಿಕೆವಿಕೆ ಡಬಲ್ ರಸ್ತೆ ಬಳಿ ಚಲಿಸುತ್ತಿತ್ತು. ಈ ವೇಳೆ, ಕಾರಿನ ಸನ್‌ರೂಫ್ ಮೂಲಕ ತಲೆ ಹೊರಗೆ ಹಾಕಿಕೊಂಡು ಬಾಲಕನೊಬ್ಬ ನಿಂತಿದ್ದ. ಕಾರು ಚಲಿಸುತ್ತಿದ್ದಾಗ, ಭಾರೀ ವಾಹನಗಳ ಸಂಚಾರ ತಡೆಯುವ ಉದ್ದೇಶದಿಂದ ಅಳವಡಿಸಲಾದ ಕಬ್ಬಿಣದ ಕಮಾನನ್ನು ಅನ್ನು ಚಾಲಕ ಹಾಗೂ ಬಾಲಕ ಗಮನಿಸಿಲ್ಲ.
ಬ್ಯಾರಿಕೇಡ್‌ಗೆ ಬಡಿಯಿತು ಬಾಲಕನ ತಲೆ :
ಅಪಾಯದ ಬಗ್ಗೆ ಅರಿವಿಲ್ಲದ ಬಾಲಕನ ತಲೆ ನೇರವಾಗಿ ಬ್ಯಾರಿಕೇಡ್‌ಗೆ ಬಡಿದಿದ್ದು, ತೀವ್ರ ಆಘಾತದಿಂದ ಆತ ತಕ್ಷಣವೇ ಕಾರಿನೊಳಗೆ ಕುಸಿದು ಬಿದ್ದಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿರುವ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ನಂತರ, ವಾಹನದ ಚಾಲಕ ಕೂಡಲೇ ಪೊಲೀಸರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರ ಪ್ರತಿಕ್ರಿಯೆ:
ವಿದ್ಯಾರಣ್ಯಪುರ ಸಂಚಾರಿ ಪೊಲೀಸರು ಘಟನೆಯ ಕುರಿತು ಮಾತನಾಡಿ, “ಸುಮಾರು ಒಂದು ವರ್ಷದ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಾಲಕನ ತಂದೆಯೊಂದಿಗೆ ಫೋನ್ ಮೂಲಕ ಸಂಪರ್ಕಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ” ಎಂದು ಎಕ್ಸ್ ಪೋಸ್ಟ್ ನಲ್ಲ ಮಾಹಿತಿ ಹಂಚಿಕೊಂಡಿದ್ದಾರೆ.
ಸನ್ ರೂಫ್ ನಲ್ಲಿ ಸ್ಟಂಟ್ ಮಾಡದಿರಿ – ಸುರಕ್ಷತಾ ಎಚ್ಚರಿಕೆ:
ಇತ್ತೀಚಿನ ದಿನಗಳಲ್ಲಿ ಕಾರುಗಳ ಸನ್‌ರೂಫ್ ತೆರೆದು, ಅಲ್ಲಿ ನಿಂತು ವಿಡಿಯೋ ಮಾಡುವುದು ಮತ್ತು ಫೋಟೋ ತೆಗೆಯುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಆದರೆ ಇದು ಕೇವಲ ಮಕ್ಕಳ ಜೀವಕ್ಕೆ ಮಾತ್ರವಲ್ಲದೆ ದೊಡ್ಡವರಿಗೂ ಅಪಾಯಕಾರಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಅತ್ಯಂತ ಎಚ್ಚರ ವಹಿಸಬೇಕು ಮತ್ತು ಚಲಿಸುತ್ತಿರುವ ವಾಹನಗಳಲ್ಲಿ ಇಂತಹ ಅಪಾಯಕಾರಿ ವರ್ತನೆಗಳಿಗೆ ಅವಕಾಶ ನೀಡಬಾರದು ಎಂದು ತಜ್ಞರು ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಪೋಷಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.






















