ಮೈಸೂರು, ಸೆ.07 www.bengaluruwire.com : ವಿಶ್ವವಿಖ್ಯಾತ ಮೈಸೂರು ದಸರಾ-2025ರ ವೈಭವವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗಾಗಿ ದಸರಾ ಟಿಕೆಟ್‌ಗಳು ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಮೈಸೂರು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆಯಲ್ಲಿ, ಸೆಪ್ಟೆಂಬರ್ 06 ರಿಂದ ಈ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.
ಈ ವರ್ಷದ ದಸರಾ ಮಹೋತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 02 ರವರೆಗೆ ನಡೆಯಲಿದ್ದು, ಮೈಸೂರು ಅರಮನೆ, ಜಂಬೂಸವಾರಿ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರವೇಶಕ್ಕೆ ಈ ಟಿಕೆಟ್‌ಗಳು ಉಪಯುಕ್ತವಾಗಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಟಿಕೆಟ್‌ಗಳನ್ನು ಕೌಂಟರ್‌ನಲ್ಲಿ ಖರೀದಿಸುವ ಅವಕಾಶದ ಜೊತೆಗೆ, ಮನೆಯಿಂದಲೇ ಸುಲಭವಾಗಿ ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಅಧಿಕೃತ ವೆಬ್‌ಸೈಟ್: https://mysoredasara.gov.in/ ನಲ್ಲಿ ಟಿಕೆಟ್‌ಗಳು ಲಭ್ಯವಿದ್ದು, ಆಸಕ್ತರು ತಮ್ಮ ಅಗತ್ಯಕ್ಕೆ ತಕ್ಕಂತೆ ವಿವಿಧ ವರ್ಗದ ಟಿಕೆಟ್‌ಗಳನ್ನು ಖರೀದಿಸಬಹುದು. ಮೈಸೂರು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ದಸರಾ ಉಸ್ತುವಾರಿ ಸಮಿತಿ ಈ ಟಿಕೆಟ್‌ಗಳ ನಿರ್ವಹಣೆಯನ್ನು ನೋಡಿಕೊಳ್ಳಲಿದೆ.

ದಸರಾ ಮಹೋತ್ಸವದ ಪ್ರತಿ ಕಾರ್ಯಕ್ರಮಗಳಿಗೂ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಹಾಗೆಯೇ, ಜಂಬೂಸವಾರಿ ವೀಕ್ಷಿಸಲು ಬಯಸುವವರಿಗೆ ವಿಶೇಷ ಗೋಲ್ಡ್ ಕಾರ್ಡ್‌ಗಳು ಸಹ ಲಭ್ಯವಿವೆ. ಈ ಕಾರ್ಡ್ ಹೊಂದಿರುವವರು ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ವೀಕ್ಷಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಟಿಕೆಟ್‌ಗಳ ಮಾರಾಟ ಆರಂಭವಾಗಿದ್ದರಿಂದ, ದಸರಾ ವೀಕ್ಷಿಸಲು ಇಚ್ಛಿಸುವ ಪ್ರವಾಸಿಗರು ಮತ್ತು ಸಾರ್ವಜನಿಕರು ಶೀಘ್ರವಾಗಿ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
ಅಕ್ಟೋಬರ್ 02ರಂದು ನಡೆಯುವ ದಸರಾ ಜಂಬೂ ಸವಾರಿ ಮೆರವಣಿಗೆ ₹3500, ಅದೇ ದಿನ ಬನ್ನಿಮಂಟಪದಲ್ಲಿ ನಡೆಯುವ ಟಾರ್ಚ್ ಲೈಟ್ ಕಾರ್ಯಕ್ರಮ ವೀಕ್ಷಿಸಲು ಟಿಕೆಟ್ ಗೆ ₹1500 ದರ ನಿಗದಿಪಡಿಸಲಾಗಿದೆ. ಇನ್ನು ಮೈಸೂರು ದಸರಾ ಗೋಲ್ಡ್ ಕಾರ್ಡಿಗೆ ₹6500 ಶುಲ್ಕವಿರಲಿದೆ. ಈ ಗೋಲ್ಡ್ ಕಾರ್ಡ್ ಹೊಂದಿದವರು ಮೈಸೂರು ಜೂ, ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಿ ದರ್ಶನ, ಮೈಸೂರು ಅರಮನೆ, 28 ಮತ್ತು 29 ಸೆಪ್ಟೆಂಬರ್ ನಡೆಯುವ ದ್ರೋಣ್ ಶೋ, ದಸರಾ ಮೆರವಣಿಗೆ ಹಾಗೂ ಬನ್ನಿಮಂಟಪದಲ್ಲಿ ನಡೆಯುವ ಟಾರ್ಚ್ ಲೈಟ್ ಪರೇಡ್ ವೀಕ್ಷಿಸಬಹುದು ಎಂದು ಅಧಿಕೃತ ವೆಬ್ ಸೈಟಿನಲ್ಲಿ ತಿಳಿಸಲಾಗಿದೆ.






















