ಬೆಂಗಳೂರು, ಸೆ.07 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ ಭೂಗಳ್ಳರಿಗೆ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಜಿ. ಅವರು ಭಾರಿ ಶಾಕ್ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒತ್ತುವರಿಯಾಗಿದ್ದ ಸುಮಾರು 11.14 ಕೋಟಿ ರೂ. ಮೌಲ್ಯದ 6 ಎಕರೆ 31 ಗುಂಟೆ ಸರ್ಕಾರಿ ಜಮೀನನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಇದು ಸರ್ಕಾರದ ಆಸ್ತಿ ರಕ್ಷಣೆ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.
ನಗರದ ನಾಲ್ಕು ತಾಲ್ಲೂಕುಗಳಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದ್ದು, ಗುಂಡುತೋಪು, ಗೋಮಾಳ, ಕೆರೆ ಜಾಗ ಹಾಗೂ ಕೃಷಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ ನಾಯಕ್ ಹಾಗೂ ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳು ಭಾಗಿಯಾಗಿದ್ದರು.
ತಾಲ್ಲೂಕುವಾರು ತೆರವು ಕಾರ್ಯಾಚರಣೆ ವಿವರ:

* ಬೆಂಗಳೂರು ಉತ್ತರ ತಾಲ್ಲೂಕು: ದಾಸನಪುರ ಹೋಬಳಿಯ ಗೋಪಾಲಪುರ ಮತ್ತು ಕಿತ್ತಗನಹಳ್ಳಿ ಗ್ರಾಮಗಳಲ್ಲಿ 3.20 ಕೋಟಿ ಮತ್ತು 0.50 ಲಕ್ಷ ರೂ. ಮೌಲ್ಯದ ಗೋಮಾಳ ಭೂಮಿಯನ್ನು ತೆರವುಗೊಳಿಸಲಾಗಿದೆ. ಹಾಗೆಯೇ, ಬೆಟ್ಟಹಳ್ಳಿ ಗ್ರಾಮದಲ್ಲಿ 0.80 ಲಕ್ಷ ರೂ. ಮೌಲ್ಯದ ಗುಂಡುತೋಪನ್ನು ವಶಕ್ಕೆ ಪಡೆಯಲಾಗಿದೆ.
* ಬೆಂಗಳೂರು ದಕ್ಷಿಣ ತಾಲ್ಲೂಕು: ತಾವರೆಕೆರೆ ಹೋಬಳಿಯ ದೇವರಮಾಚೋಹಳ್ಳಿ ಗ್ರಾಮದಲ್ಲಿ 0.90 ಲಕ್ಷ ರೂ. ಮೌಲ್ಯದ ಕೆರೆ ಜಾಗ ಮತ್ತು ಬೇಗೂರು ಹೋಬಳಿಯ ಮೈಲಸಂದ್ರದಲ್ಲಿ 2 ಕೋಟಿ ರೂ. ಮೌಲ್ಯದ ಕೆರೆಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ.
* ಆನೇಕಲ್ ತಾಲ್ಲೂಕು: ಸರ್ಜಾಪುರ ಹೋಬಳಿಯ ಹಲಸಹಳ್ಳಿ ತಿಪ್ಪಸಂದ್ರ ಗ್ರಾಮದಲ್ಲಿ 0.20 ಲಕ್ಷ ರೂ. ಮತ್ತು 0.04 ಲಕ್ಷ ರೂ. ಮೌಲ್ಯದ ಓಣಿ ಮತ್ತು ಗುಂಡುತೋಪನ್ನು ತೆರವುಗೊಳಿಸಲಾಗಿದೆ.
* ಬೆಂಗಳೂರು ಪೂರ್ವ ತಾಲ್ಲೂಕು: ವರ್ತೂರು ಹೋಬಳಿಯ ಹಾಡೋಸಿದ್ದಾಪುರ ಮತ್ತು ಯರಪ್ಪನಹಳ್ಳಿ ಗ್ರಾಮಗಳಲ್ಲಿ ಕ್ರಮವಾಗಿ 1.50 ಕೋಟಿ ಮತ್ತು 2 ಕೋಟಿ ರೂ. ಮೌಲ್ಯದ ಸರ್ಕಾರಿ ಗೋಮಾಳ ಭೂಮಿಯನ್ನು ಒತ್ತುವರಿಮುಕ್ತಗೊಳಿಸಲಾಗಿದೆ.
ಒಟ್ಟಾರೆಯಾಗಿ, ಈ ವಶಪಡಿಸಿಕೊಂಡ ಭೂಮಿಯ ಒಟ್ಟು ಅಂದಾಜು ಮೌಲ್ಯ 11.14 ಕೋಟಿ ರೂ. ಆಗಿದೆ. ಬೆಂಗಳೂರು ನಗರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಗಂಭೀರ ಸಮಸ್ಯೆಯಾಗಿದ್ದು, ಜಿಲ್ಲಾಧಿಕಾರಿಗಳ ಈ ಕ್ರಮವು ಸರ್ಕಾರದ ಆಸ್ತಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಶಂಸನೀಯ ಪ್ರಯತ್ನವಾಗಿದೆ. ಈ ಕಾರ್ಯಾಚರಣೆಯು ಇತರೆ ಭೂಗಳ್ಳರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.






















