ಬೆಂಗಳೂರು, ಸೆ.07 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಿರ್ಮಿಸಲಾದ ಫ್ಲಾಟ್‌ಗಳು ಮತ್ತು ವಿಲ್ಲಾಗಳನ್ನು ಖರೀದಿಸಿ, ಕ್ರಯಪತ್ರ ನೋಂದಣಿಗಾಗಿ ಕಾಯುತ್ತಿರುವ ಹಂಚಿಕೆದಾರರಿಗೆ ಒಂದು ಮಹತ್ವದ ಅವಕಾಶ ಲಭಿಸಿದೆ.
ಪ್ರಾಧಿಕಾರವು ಅಕ್ಟೋಬರ್ 3 ರಿಂದ 16 ರವರೆಗೆ ಬೃಹತ್ ಕ್ರಯಪತ್ರ ನೋಂದಣಿ ಮೇಳವನ್ನು ಆಯೋಜಿಸಿದೆ. ಈ ಮೇಳದ ಮೂಲಕ ಸುಮಾರು 400 ಫ್ಲಾಟ್‌ಗಳಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಬಿಡಿಎ ಸಜ್ಜಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಡಿಎ, ಈಗಾಗಲೇ ಫ್ಲಾಟ್‌ಗಳು/ವಿಲ್ಲಾಗಳನ್ನು ಖರೀದಿಸಿರುವ ಎಲ್ಲಾ ಹಂಚಿಕೆದಾರರು ಈ ಮೇಳದ ಲಾಭ ಪಡೆಯುವಂತೆ ತಿಳಿಸಿದೆ.

ಖರೀದಿರಾರು ಏನು ಮಾಡಬೇಕು? :

ಕ್ರಯಪತ್ರ ನೋಂದಣಿ ಮೇಳದಲ್ಲಿ ಭಾಗವಹಿಸಲು, ಖರೀದಿದಾರರು ಸೆಪ್ಟೆಂಬರ್ 30 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅಗತ್ಯ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಸ್ವಯಂ ದೃಢೀಕರಣ ಪತ್ರ, ಬ್ಯಾಂಕ್ ಎನ್ಒಸಿ, ಫೋಟೋ ಅಟೆಸ್ಟೇಷನ್, ಮತ್ತು ಮೂರು ಪಾಸ್‌ಪೋರ್ಟ್ ಫೋಟೋಗಳು ಸೇರಿವೆ. ಒಂದು ವೇಳೆ ಅಗತ್ಯವಿದ್ದರೆ, 16B ಮತ್ತು 26QB ಫಾರ್ಮ್‌ಗಳನ್ನು ಸಹ ಸಲ್ಲಿಸಬೇಕಾಗುತ್ತದೆ.
ದಾಖಲೆಗಳು ಮತ್ತು ಹಣ ಪಾವತಿ ಸಂಪೂರ್ಣವಾಗಿ ಸಲ್ಲಿಸಿದವರಿಗೆ “ಮೊದಲು ಬಂದವರಿಗೆ ಪ್ರಥಮ ಆದ್ಯತೆ” (First Come First Service) ಆಧಾರದ ಮೇಲೆ ಕ್ರಯಪತ್ರ ನೋಂದಣಿ ಮಾಡಲಾಗುತ್ತದೆ. ಈ ನೋಂದಣಿ ಪ್ರಕ್ರಿಯೆಯು ಬಿಡಿಎ ಕೇಂದ್ರ ಕಚೇರಿ, ಟಿ. ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-20 ಇಲ್ಲಿ ನಡೆಯಲಿದೆ.
ವಿವಿಧ ಗಾತ್ರದ ಫ್ಲಾಟ್‌ಗಳು ಮತ್ತು ವಿಲ್ಲಾಗಳು :
ಬಿಡಿಎ ಹುಣ್ಣಿಗೆರೆ ಫ್ಲಾಟ್, ಕಣಿಮಿಣಿಕೆ ಹಾಗೂ ಕೊಮ್ಮಘಟ್ಟದಲ್ಲಿ ನಿರ್ಮಿಸಿರುವ 1 ಬಿಎಚ್ ಕೆ, 2 ಬಿಎಚ್ ಕೆ, ಮತ್ತು 3 ಬಿಎಚ್ ಕೆ ಫ್ಲಾಟ್‌ಗಳ ಜೊತೆಗೆ ಹುಣ್ಣಿಗೆರೆಯಲ್ಲಿ ನಿರ್ಮಿಸಿರುವ ವಿಲ್ಲಾಗಳ ನೋಂದಣಿಯನ್ನು ಈ ಮೇಳದಲ್ಲಿ ನಡೆಸಲಾಗುವುದು. ಪ್ರಾಧಿಕಾರವು ನಿರ್ಮಿಸಿರುವ ಒಟ್ಟು 340 ವಿಲ್ಲಾಗಳಲ್ಲಿ ಈಗಾಗಲೇ 100 ವಿಲ್ಲಾಗಳು ಹಂಚಿಕೆಯಾಗಿವೆ. 3 ಬಿಎಚ್ ಕೆ ವಿಲ್ಲಾಗಳಿಗೆ ಅಂದಾಜು ₹90 ಲಕ್ಷ ಮತ್ತು 4 ಬಿಎಚ್ ಕೆ ವಿಲ್ಲಾಗಳಿಗೆ ₹1.26 ಕೋಟಿ ದರ ನಿಗದಿ ಮಾಡಲಾಗಿದೆ.
ಸಾರ್ವಜನಿಕರಿಗೆ ಯಾವುದೇ ತೊಂದರೆ ಅಥವಾ ಕಿರುಕುಳ ಆಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಡಿಎ ಭರವಸೆ ನೀಡಿದೆ. ಈ ಸುವರ್ಣಾವಕಾಶವನ್ನು ಈಗಾಗಲೇ ಫ್ಲಾಟ್ ಮತ್ತು ವಿಲ್ಲಾ ಖರೀದಿಸಿರುವ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಾಧಿಕಾರ ಕೋರಿದೆ.























