ಬೆಂಗಳೂರು, ಸೆ.03 www.bengaluruwire.com : ಬೆಂಗಳೂರು ಮಹಾನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ಗೆ ಸಂಪೂರ್ಣ ನಿಷೇಧ ಹೇರಿದ್ದರೂ ಕೂಡ, ಅದರ ಅಕ್ರಮ ದಾಸ್ತಾನು ಮತ್ತು ಮಾರಾಟ ವ್ಯಾಪಕವಾಗಿ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ ಬಿಎಸ್‌ಡಬ್ಲ್ಯೂಎಂಎಲ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಇಂದು ಬೃಹತ್ ಕಾರ್ಯಾಚರಣೆ ನಡೆಸಿದೆ.
ಈ ಕಾರ್ಯಾಚರಣೆಯ ಪರಿಣಾಮವಾಗಿ ಸುಮಾರು 9,567 ಕೆ.ಜಿ. ಏಕ ಬಳಕೆ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ₹7.38 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಬಿಎಸ್‌ಡಬ್ಲ್ಯೂಎಂಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ತಿಳಿಸಿದ್ದಾರೆ.
ನಗರದಾದ್ಯಂತ ಹಲವು ದಿನಗಳಿಂದ ನಡೆಸಿದ ಈ ವಿಶೇಷ ಕಾರ್ಯಾಚರಣೆಯಲ್ಲಿ, ಅಧಿಕಾರಿಗಳು ಉತ್ಪಾದಕರು, ದಾಸ್ತಾನುದಾರರು ಮತ್ತು ಮಾರಾಟಗಾರರ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೆ.ಆರ್. ಮಾರುಕಟ್ಟೆಯಲ್ಲಿನ ಒಂದು ಗೋಡೌನ್ ಅನ್ನು ಸೀಜ್ ಮಾಡಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಯ ವಿವರಗಳು ಹೀಗಿವೆ:

* ಕೆ.ಆರ್. ಮಾರುಕಟ್ಟೆ: ಈ ಪ್ರದೇಶದಲ್ಲಿ 25 ಪ್ರಕರಣಗಳನ್ನು ದಾಖಲಿಸಿ, ಒಟ್ಟು 6,339 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು, ₹33,500 ದಂಡ ಸಂಗ್ರಹಿಸಲಾಗಿದೆ.
* ಅವೆನ್ಯೂ ರಸ್ತೆ: ಇಲ್ಲಿ 17 ಪ್ರಕರಣಗಳಿಂದ 300 ಕೆ.ಜಿ. ಪ್ಲಾಸ್ಟಿಕ್ ವಶಕ್ಕೆ ಪಡೆದು, ₹40,000 ದಂಡ ವಿಧಿಸಲಾಗಿದೆ.
* ಕಲಾಸಿಪಾಳ್ಯ: 24 ಪ್ರಕರಣಗಳಲ್ಲಿ 150 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು, ₹45,900 ದಂಡ ಸಂಗ್ರಹಿಸಲಾಗಿದೆ.

* ಯಶವಂತಪುರ ಮಾರುಕಟ್ಟೆ: 27 ಪ್ರಕರಣಗಳಲ್ಲಿ 110 ಕೆ.ಜಿ. ಪ್ಲಾಸ್ಟಿಕ್ ವಶಕ್ಕೆ ಪಡೆದು, ₹61,800 ದಂಡ ವಸೂಲಿ ಮಾಡಲಾಗಿದೆ.
* ಪೀಣ್ಯ ಕೈಗಾರಿಕಾ ಪ್ರದೇಶ: 27 ಪ್ರಕರಣಗಳಲ್ಲಿ 450 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು, ₹1,00,500 ದಂಡ ವಿಧಿಸಲಾಗಿದೆ.
* ದಾಸರಹಳ್ಳಿ (ಉತ್ಪಾದನೆ): ಇಲ್ಲಿನ ಒಂದು ಪ್ರಕರಣದಲ್ಲಿ 218 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿ, ₹50,000 ದಂಡ ಸಂಗ್ರಹಿಸಲಾಗಿದೆ.
* ಚಾಮರಾಜಪೇಟೆ ಮತ್ತು ಇತರೆ ಪ್ರದೇಶ: ಮಕ್ಕಳಕೂಟ, ಅಕ್ಕಿಪೇಟೆ ಮತ್ತು ಬಳೆಪೇಟೆ ಸೇರಿದಂತೆ 37 ಪ್ರಕರಣಗಳಲ್ಲಿ ಸುಮಾರು 2,000 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದ್ದು, ಅತಿ ಹೆಚ್ಚು ಅಂದರೆ ₹4,07,000 ದಂಡ ವಸೂಲಿ ಮಾಡಲಾಗಿದೆ.
ಒಟ್ಟಾರೆಯಾಗಿ, 158 ಪ್ರಕರಣಗಳನ್ನು ದಾಖಲಿಸಿ, 9,567 ಕೆ.ಜಿ. ಏಕ ಬಳಕೆ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸಂಗ್ರಹಿಸಿದ ಒಟ್ಟು ದಂಡದ ಮೊತ್ತ ₹7,38,700 ಆಗಿದೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಅದರ ಬದಲಿಗೆ ಬಟ್ಟೆ ಚೀಲಗಳನ್ನು ಬಳಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕು ಎಂದು ಬಿಎಸ್‌ಡಬ್ಲ್ಯೂಎಂಎಲ್ ಮುಖ್ಯಸ್ಥರು ಮನವಿ ಮಾಡಿದ್ದಾರೆ.






















