ಬೆಂಗಳೂರು: ಸೆ.02 www.bengaluruwire.com : ಬಿಬಿಎಂಪಿಯಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ 2.75 ಲಕ್ಷ ಆಸ್ತಿ ಸುಸ್ತಿದಾರರಿಗೆ, ಪಾಲಿಕೆಯು 786 ಕೋಟಿ ರೂ. ಕಟ್ಟುವಂತೆ ಎಲೆಕ್ಟ್ರಾನಿಕ್ ಡಿಮ್ಯಾಂಡ್ ನೋಟಿಸ್ ಕಳುಹಿಸಿದೆ.
ಆಸ್ತಿತೆರಿಗೆ ಪಾವತಿಸದ ಸುಸ್ತಿದಾರರು BBMPtax.karnataka.gov.in ನಲ್ಲಿ ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ, ಇಲ್ಲದಿದ್ದರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚರ ಮತ್ತು ಸ್ಥಿರ ಆಸ್ತಿಗಳ ತುರ್ತು ಮಾರಾಟ ಸೇರಿದಂತೆ ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ತೆರಿಗೆ ಸುಸ್ತಿದಾರರು ಕಾರಣಗಳೊಂದಿಗೆ https://BBMPeNyaya.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
2025-26ನೇ ಸಾಲಿನಲ್ಲಿ 21.73 ಲಕ್ಷ ಆಸ್ತಿಗಳಿಂದ ಪಾಲಿಕೆಯು 4,095 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹ ಇರಿಸಿಕೊಂಡಿದೆ. 3.75 ಲಕ್ಷ ಸುಸ್ತಿದಾರರಿಂದ ₹836.34 ಕೋಟಿ ತೆರಿಗೆ ಬಾಕಿಯಿದ್ದರೆ, 9,904 ಆಸ್ತಿಗಳಿಂದ ₹152.80 ಕೋಟಿ ಪರಿಷ್ಕೃತ ತೆರಿಗೆ ಹಾಗೂ ದಂಡ ಬಾಕಿಯಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೊದಲ ಎರಡು ತಿಂಗಳಲ್ಲಿ ಬಿಬಿಎಂಪಿಯು ₹2,424.93 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಿತ್ತು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕೇವಲ ₹786 ಕೋಟಿಯಷ್ಟೇ ಹಣ ಸಂಗ್ರಹಿಸಲು ಸಾಧ್ಯವಾಗಿದೆ.
ಬಿಬಿಎಂಪಿಯು ಜಿಬಿಎ ಮತ್ತು ಐದು ನಗರ ಪಾಲಿಕೆಗಳಾಗಿ ರೂಪುಗೊಳ್ಳುವ ಹಂತದಲ್ಲಿ, ಇ-ಖಾತಾ, ಷೋಕಾಸ್ ನೋಟಿಸ್ ನೀಡಿಕೆ, ಹೀಗೆ ಹಲವು ಕಾರಣಗಳಿಂದ ಸಾಮಾನ್ಯವಾಗಿ ಸಂಗ್ರಹಿಸುವ ಆಸ್ತಿ ತೆರಿಗೆ ಪ್ರಕ್ರಿಯೆಗೆ ತೊಡಕಾಗಿದೆ ಎಂದು ಪಾಲಿಕೆ ಕಂದಾಯ ಅಧಿಕಾರಿಗಳು ಹೇಳುತ್ತಾರೆ.






















