ಬೆಂಗಳೂರು, ಸೆ.2 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತದಲ್ಲಿ ಮಹತ್ವದ ಬದಲಾವಣೆಯ ಭಾಗವಾಗಿ, ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲಿನ 291 ಬ್ಯಾಂಕ್ ಖಾತೆಗಳನ್ನು ಹಂತ ಹಂತವಾಗಿ ಮುಚ್ಚಲು ಆದೇಶಿಸಿದೆ.
ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಆದೇಶದಲ್ಲಿ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಅಡಿಯಲ್ಲಿ ಐದು ಹೊಸ ನಗರ ಪಾಲಿಕೆಗಳ ರಚನೆಯ ಪೂರ್ವಭಾವಿ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಬ್ಯಾಂಕ್ ಖಾತೆಗಳ ವಿವರ ಮತ್ತು ನಿರ್ಧಾರಗಳು:
ಪ್ರಸ್ತುತ, ಬಿಬಿಎಂಪಿ ತನ್ನ ವಿವಿಧ ಕಚೇರಿಗಳ ಮೂಲಕ ಒಟ್ಟು 291 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದೆ. ಅವುಗಳ ವಿವರ ಇಂತಿದೆ:

* ಕೇಂದ್ರ ಕಚೇರಿ (ಆದಾಯ ಮತ್ತು ಪಾವತಿ ಖಾತೆಗಳು): 86 ಖಾತೆಗಳು.
* ವಲಯ ಕಚೇರಿಗಳ ಡಿಸಿಎಫ್ (DCF) ಖಾತೆಗಳು: 37 ಖಾತೆಗಳು.
* ವಿಭಾಗ ಮಟ್ಟದ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ (EE) ಖಾತೆಗಳು: 66 ಖಾತೆಗಳು.
* ಶಾಲಾ ಮತ್ತು ಕಾಲೇಜುಗಳ ಖಾತೆಗಳು: 73 ಖಾತೆಗಳು.
* ಆಸ್ಪತ್ರೆಗಳ ಖಾತೆಗಳು: 29 ಖಾತೆಗಳು.
ಸರ್ಕಾರದ ಆದೇಶದ ಪ್ರಕಾರ, ಸದ್ಯಕ್ಕೆ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಹಣದ ಸ್ವೀಕೃತಿಯನ್ನು (inflow-receipt-deposit) ಮುಂದುವರಿಸಲು ಅನುಮತಿ ನೀಡಲಾಗಿದೆ. ಆದರೆ, ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಮೊತ್ತವನ್ನು ಈ ಖಾತೆಗಳಿಂದ ಹಿಂಪಡೆಯುವಂತಿಲ್ಲ (No withdrawal) ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಹಾಗಾದರೆ ಮುಂದೇನು? :
* ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಅಡಿಯಲ್ಲಿ ಹೊಸದಾಗಿ ರಚನೆಯಾಗಲಿರುವ ಐದು ನಗರ ಪಾಲಿಕೆಗಳು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತಮ್ಮದೇ ಆದ ಬ್ಯಾಂಕ್ ಖಾತೆಗಳನ್ನು ತೆರೆದ ಕೂಡಲೇ, ಬಿಬಿಎಂಪಿಯ ಪ್ರಸ್ತುತ ಖಾತೆಗಳಲ್ಲಿರುವ ಹಣವನ್ನು ಸೂಕ್ತ ರೀತಿಯಲ್ಲಿ ವಿಭಜಿಸಿ ಆಯಾ ಪಾಲಿಕೆಗಳು ಮತ್ತು ಜಿ.ಬಿ.ಎ.ಗೆ ವರ್ಗಾಯಿಸಲು ಸರ್ಕಾರದ ಅನುಮೋದನೆ ಪಡೆದು ಕ್ರಮ ಕೈಗೊಳ್ಳಬೇಕು.
* ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಪ್ರಸ್ತುತ ಇರುವ ಎಲ್ಲ 291 ಖಾತೆಗಳನ್ನು ಮುಚ್ಚಲಾಗುತ್ತದೆ.
* ಬಿಬಿಎಂಪಿ ಕೇಂದ್ರ ಕಚೇರಿಯ 86 ಖಾತೆಗಳಲ್ಲಿ, 13 ಖಾತೆಗಳನ್ನು ಈಗಲೇ ಮುಚ್ಚಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಮತ್ತು ಅವುಗಳ ಬಾಕಿ ಹಣವನ್ನು ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚಿಸಲಾಗಿತ್ತು. ಉಳಿದ 73 ಖಾತೆಗಳನ್ನು ಹೊಸ ವ್ಯವಸ್ಥೆ ಜಾರಿಗೆ ಬರುವವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.
* ಇದೇ ರೀತಿ, ವಲಯ, ವಿಭಾಗ, ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳ ಖಾತೆಗಳನ್ನು ಸದ್ಯಕ್ಕೆ ಮುಚ್ಚದಿರಲು ತೀರ್ಮಾನಿಸಲಾಗಿದೆ. ಈ ಖಾತೆಗಳನ್ನು ದೈನಂದಿನ ಪಾವತಿಗಳು ಮತ್ತು ವಹಿವಾಟುಗಳಿಗೆ ಬಳಸಲಾಗುತ್ತಿದೆ. ಹೊಸ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾದ ನಂತರ ಈ ಖಾತೆಗಳನ್ನು ಮುಚ್ಚಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಕ್ರಮವು ಗ್ರೇಟರ್ ಬೆಂಗಳೂರು ಆಡಳಿತ ಪುನರ್ರಚನೆಯತ್ತ ಸರ್ಕಾರದ ಮೊದಲ ಹೆಜ್ಜೆಯಾಗಿದ್ದು, ಹೊಸದಾಗಿ ರೂಪುಗೊಳ್ಳಲಿರುವ ಆಡಳಿತ ವ್ಯವಸ್ಥೆಗೆ ಸುಗಮ ಪರಿವರ್ತನೆಗೆ ಸಹಾಯಕ ಎನ್ನಲಾಗಿದೆ.






















