ಬೆಂಗಳೂರು/ಧರ್ಮಸ್ಥಳ, ಸೆ.01 www.bengaluruwire.com : ಧರ್ಮಸ್ಥಳ ದೇವಸ್ಥಾನ ಮತ್ತು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಮಧ್ಯೆ, ಬಿಜೆಪಿ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಮುನಿರತ್ನ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಹಲವಾರು ಶಾಸಕರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿದರು.

ಈ ನಡುವೆ ಬಿಜೆಪಿಯ ಧರ್ಮಸ್ಥಳ ಚಲೋ ಕಾರ್ಯಕ್ರಮದ ಭಾಗವಾಗಿ, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಸಾವಿರಾರು ಕಾರ್ಯಕರ್ತರೊಂದಿಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಣಿ ಅಬ್ಬಕ್ಕ ಆಟದ ಮೈದಾನದಿಂದ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸೌಜನ್ಯ ಪ್ರಕರಣದ ಹಿಂದೆ ಅಂತರಾಷ್ಟ್ರೀಯ ಮಟ್ಟದ ಪಿತೂರಿ ಇದೆ ಎಂದು ಆರೋಪಿಸಿದರು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗೆ ವಹಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದು ಎನ್ಐಎ ತನಿಖೆಯಿಂದ ಬಹಿರಂಗವಾಗುತ್ತದೆ ಎಂದು ಅವರು ಹೇಳಿದರು.

ಬಸ್ ತಡೆಯುವ ಸಾಧ್ಯತೆ ಇರುವುದರಿಂದ ಕಾರು ಮತ್ತು ಟೆಂಪೋ ಟ್ರಾವೆಲ್ಸ್ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿರುವುದಾಗಿ ಗೋಪಾಲಯ್ಯ ತಿಳಿಸಿದರು.

ಬಿಜೆಪಿಯ ಹಮ್ಮಿಕೊಂಡಿರುವ ಧರ್ಮಸ್ಥಳ ಚಲೋ ಕುರಿತಂತೆ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ವಿವಾದವು ಬಿಜೆಪಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಫಲಿತಾಂಶ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕು ಎಂದು ಈ ಹಿಂದೆ ಬಿಜೆಪಿಯವರೇ ಆಗ್ರಹಿಸಿದ್ದರು. ಆದರೆ, ವಿಶೇಷ ತನಿಖಾ ದಳ (SIT) ರಚನೆಯಾದಾಗ ಅವರು ಮೌನ ವಹಿಸಿದ್ದರು.
ಈಗ ಏಕಾಏಕಿ ‘ಧರ್ಮಸ್ಥಳ ಚಲೋ’ ಎಂದು ಘೋಷಿಸಿರುವುದು ವಿಚಿತ್ರವಾಗಿದೆ ಎಂದು ಖರ್ಗೆ ಹೇಳಿದರು. ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆ (CBI) ಗೆ ವಹಿಸಬೇಕು ಎಂಬ ಬಿಜೆಪಿಯವರ ಬೇಡಿಕೆಯ ಬಗ್ಗೆ ಖರ್ಗೆ ಪ್ರಶ್ನಿಸಿದರು. ಸಿಬಿಐ ಈಗಾಗಲೇ ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಪತ್ರ ಬರೆದಿದ್ದು, ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣವನ್ನು ಎನ್‍ಐಎಗೆ ವಹಿಸಬೇಕೆಂದು ಆಗ್ರಹಿಸಿ ರಾಜ್ಯ ಬಿಜೆಪಿ ವತಿಯಿಂದ ನಡೆಯುವ ಧರ್ಮಸ್ಥಳ ಚಲೋ” ಸಮಾವೇಶದ ಸಂಬಂಧ ಸೋಮವಾರ ಮಧ್ಯಾಹ್ನ 1 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮುಖ್ಯದ್ವಾರದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಪಾದಯಾತ್ರೆ ನಡೆಯಲಿದೆ. ನಂತರ 2 ಗಂಟೆಗೆ ಬೃಹತ್ ಸಮಾವೇಶ ಜರುಗಲಿದೆ.























