ಬೆಂಗಳೂರು, ಆ.31 www.bengaluruwire.com : ದೇಶಸೇವೆಗಾಗಿ ಹಗಲಿರುಳು ದುಡಿಯುವ ಭಾರತೀಯ ಸೇನೆಯ ಸೈನಿಕರು ಹಾಗೂ ಅವರ ಕುಟುಂಬದವರ ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷೇಮಕ್ಕಾಗಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಇಂದು ವಿಶೇಷ ಶಿಬಿರ ಆಯೋಜಿಸಲಾಗಿತ್ತು. ಬಾಣಸವಾಡಿ ಮಿಲಿಟರಿ ಗ್ಯಾರಿಸನ್‌ನ ಭಾರತೀಯ ಸೇನೆಯ ಗೂರ್ಖಾ ಅಂಫಿಬಿಯನ್ಸ್ ಪಡೆಯ ಸೈನಿಕರು ಮತ್ತು ಅವರ ಕುಟುಂಬದವರು ದಿನಪೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೇನೆಯ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸ್ಥೈರ್ಯ, ಒತ್ತಡ ನಿರ್ವಹಣೆ ಹಾಗೂ ಭಾವನಾತ್ಮಕ ಸಮತೋಲನವನ್ನು ಬಲಪಡಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಮಾರ್ಗದರ್ಶಿ ಧ್ಯಾನ, ಯೋಗ ನಿದ್ರಾ, ಮತ್ತು ಆಶ್ರಮದ ಪ್ರವಾಸವನ್ನು ಏರ್ಪಡಿಸಲಾಗಿತ್ತು.
ಶಿಬಿರದ ಪ್ರಮುಖ ಆಕರ್ಷಣೆ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಅವರೊಂದಿಗಿನ ಸಂವಾದವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ರಕ್ಷಣೆಗಾಗಿ ಸೈನಿಕರು ಮಾಡುತ್ತಿರುವ ತ್ಯಾಗ ಮತ್ತು ಬಲಿದಾನಗಳನ್ನು ಶ್ಲಾಘಿಸಿದರು. ಸಾಮರಸ್ಯ, ಆಂತರಿಕ ಶಕ್ತಿ ಮತ್ತು ಸೇವೆಗಳ ಮಹತ್ವವನ್ನು ತಿಳಿ ಹೇಳಿದರು. ಸೇನಾಪಡೆಗಳ ಕಲ್ಯಾಣಕ್ಕಾಗಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

























