ಬೆಂಗಳೂರು, ಆ.31 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ವಾಗಿ ಪರಿವರ್ತಿತವಾಗುವ ಹಂತದಲ್ಲಿ ಈ ಹಿಂದೆ ಪಾಲಿಕೆ ಕೇಂದ್ರ ಕಚೇರಿಯಾಗಿದ್ದ ಹಳೆಯ ಕಲ್ಲಿನ ಕಟ್ಟಡ (ಅನೆಕ್ಸ್-1) ಕಟ್ಟಡದ ಮೀಟಿಂಗ್ ಹಾಲ್-1 ನವೀಕೃತಗೊಂಡು ಜಿಬಿಎ ಸಭೆಗಳಿಗೆ ಸಿದ್ಧವಾಗಿದೆ.
ಸೆ.02ರಂದು ರಾಜ್ಯ ಸರ್ಕಾರ ಅಧಿಕೃತವಾಗಿ ಐದು ಪಾಲಿಕೆಗಳ ಕುರಿತಂತೆ ಅದಸಿಸೂಚನೆ ಹೊರಡಿಸಿದ ಬಳಿಕ ಬಿಬಿಎಂಪಿ ತನ್ನ ಸಂಪೂರ್ಣ ಅಸ್ಥಿತ್ವ ಕಳೆದುಕೊಂಡು ಜಿಬಿಎ ಆಗ ಬದಲಾಗಿದೆ. ಹೀಗಾಗಿ ಜಿಬಿಎ ಪ್ರಾಧಿಕಾರದ ಅಧ್ಯಕ್ಷರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇದೇ ಅನೆಕ್ಸ್-1 ಜಿಬಿಎ ಕಟ್ಟಡದ ಮೀಟಿಂಗ್ ಹಾಲ್ ನಲ್ಲಿ ಸಭೆ ನಡೆಸಲಿದ್ದಾರೆ. 1 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಮೀಟಿಂಗ್ ಹಾಲ್ ತನ್ನ ಮೂಲವಿನ್ಯಾಸಕ್ಕೆ ಚ್ಯುತಿಯಾಗದಂತೆ ನವೀಕರಣಗೊಂಡಿದೆ.
ಈ ನವೀಕೃತ ಹಾಲ್ ಅನ್ನು ಬಿಬಿಎಂಪಿಯ ಕೊನೆಯ ಆಡಳಿತಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಶನಿವಾರ ಸಂಜೆ ಅನೌಪಚಾರಿಕವಾಗಿ ಉದ್ಘಾಟಿಸಿದರು.
ನವೀಕೃತ ಮೀಟಿಂಗ್ ಹಾಲ್ ಸೌಂಡ್ ಪ್ರೂಫ್ :

ಈ ಮೀಟಿಂಗ್ ಹಾಲ್-1 ನಲ್ಲಿ ಈ ಮೊದಲು ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ಮೇಯರ್ ಆಡಳಿತಾವಧಿಯಲ್ಲಿ ಪ್ರಮುಖ ಸಭೆಗಳು ಆಯೋಜಿತವಾಗುತ್ತಿದ್ದವು. ಆಗ ಸಭೆಯಲ್ಲಿ ಮೈಕ್ ನಲ್ಲಿ ಮಾತಾನಾಡುವಾಗ ಸೂಕ್ತ ರೀತಿ ಧ್ವನಿ ಕೇಳಿಸದೆ ಸಮಸ್ಯೆಯಾಗುತ್ತಿತ್ತು. ಆದರೆ ಈಗ ಸೌಂಡ್ ಪ್ರೂಫ್ ರೀತಿಯಲ್ಲಿ ಒಳ ವಿನ್ಯಾಸ ಮಾಡಿದ್ದು, ಸೂಕ್ತ ಹವಾನಿಯಂತ್ರಣ ವ್ಯವಸ್ಥೆ, ಬೆಳಕಿನ ವಿನ್ಯಾಸ, ಆಕರ್ಷಕ ಟೀಪಾಯಿ, ನೆಲಕ್ಕೆ ಮರಹಾಸು ಸೇರಿದಂತೆ ಅತ್ಯಾಧುನಿಕವಾಗಿ, ಪಾರಂಪರಿಕ ಕಟ್ಟಡದ ಹಳೆಯ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಪಾಲಿಕೆ ಎಂಪಿಇಡಿ ವಿಭಾಗ ಈ ಹಾಲ್ ಅನ್ನು ಐದು ತಿಂಗಳಲ್ಲಿ ನವೀಕರಣ ಮಾಡಿ ಮುಗಿಸಿದೆ.
ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್ ರಚನೆ :
ಐದು ನಗರ ಪಾಲಿಕೆಗಳು ಚಾಲ್ತಿಗೆ ಬಂದ ಬಳಿಕ ಒಟ್ಟು 450 ವಾರ್ಡ್ ಗಳು ರಚನೆಯಾಗಲಿವೆ. ಈ ಮೊದಲು ತಲಾ 110 ವಾರ್ಡ್ ಗಳಂತೆ 550 ವಾರ್ಡ್ ರಚಿಸಲು ಪ್ರಸ್ತಾವನೆಯಿತ್ತು. ಆನಂತರ ವಾರ್ಷಿಕ ಆಡಳಿತಾತ್ಮಕ ವೆಚ್ಚ ₹298 ಹೆಚ್ಚುವರಿ ವೆಚ್ಚವಾಗುತ್ತದೆಂಬ ಕಾರಣಕ್ಕೆ 100 ವಾರ್ಡ್ ಗಳನ್ನು ಕಡಿತ ಮಾಡಲಾಗಿದೆ. ಇದರಿಂದ 161 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಪಶ್ಚಿಮದಲ್ಲಿ 117 ವಾರ್ಡ್ ಗಳು, ಬೆಂಗಳೂರು ಉತ್ತರದಲ್ಲಿ, ಬೆಂಗಳೂರು ಕೇಂದ್ರದಲ್ಲಿ ಹಾಗೂ ಬೆಂಗಳೂರು ದಕ್ಷಿಣದಲ್ಲಿ ತಲಾ 90 ವಾರ್ಡ್ ಗಳು ಹಾಗೂ ಬೆಂಗಳೂರು ಪೂರ್ವದಲ್ಲಿ 63 ವಾರ್ಡ್ ಗಳು ತಲೆ ಎತ್ತಲಿವೆ. ಅಲ್ಲದೆ 50 ವಿಭಾಗಗಳು ಹಾಗೂ 150 ಉಪವಿಭಾಗಗಳು ರಚನೆಯಾಗಲಿದೆ.
ನೂತನ ಜಿಬಿಎ, ಬಿ-ಸ್ಮೈಲ್, ಐದು ನಗರ ಪಾಲಿಕೆಗಳು, ವಲಯ ಸಿಬ್ಬಂದಿ, ಬಿಎಸ್ ಡಬ್ಲ್ಯುಎಂಎಲ್, ಮಿನಿಸ್ಟಿರಿಯಲ್ ಸಿಬ್ಬಂದಿ ಹಾಗೂ ಬಿಎಂಟಿಎಫ್ ಗಳಿಗೆ ಒಟ್ಟಾರೆ 23,689 ಹುದ್ದೆಗಳು ಅಗತ್ಯವಿದ್ದು, 22,411 ಹುದ್ದೆಗಳು ಮಂಜೂರಾಗಿದೆ. ಆದರೆ ಪ್ರಸ್ತುತ 18,790 ಸಿಬ್ಬಂದಿ ಬಿಬಿಎಂಪಿಯಲ್ಲಿ ಕಾರ್ಯನಿರ್ವವಹಿಸುತ್ತಿದ್ದು, ಹೆಚ್ಚುವರಿಯಾಗಿ 4,899 ಹುದ್ದೆಗಳಿಗೆ ನೇಮಕಾತಿ ಅಗತ್ಯವಿದೆ.
ಜಿಬಿಎ ಅಡಿಯಲ್ಲಿ ಪ್ರತಿ ನಗರ ಪಾಲಿಕೆಗಳಲ್ಲಿ ಆಡಳಿತ, ಕಂದಾಯ, ಆರೋಗ್ಯ, ಸಾರ್ವಜನಿಕ ಆರೋಗ್ಯ,ಕೌನ್ಸಿಲ್, ಕಾನೂನು ಘಟಕ, ಸಾರ್ವಜನಿಕ ಸಂಪರ್ಕಾಧಿಕಾರಿ, ನಗರ ಯೋಜನೆ, ಕಲ್ಯಾಣ ಸೇರಿದಂತೆ 19 ವಿಭಾಗಗಳು ಇರಲಿವೆ.























