ಬೆಂಗಳೂರು, ಆ.30 www.bengaluruwire.com : ದೀರ್ಘಕಾಲದಿಂದ ಕಾಯುತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಸಿಹಿ ಸುದ್ದಿ ನೀಡಿದೆ.
ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಯ ಅಂತಿಮ ಅಯ್ಕೆ ಪಟ್ಟಿಯನ್ನು ನಿಗಮವು ಪ್ರಕಟಿಸಿದೆ. ಒಟ್ಟು 491 ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದ್ದು, ಇದು ವಿದ್ಯುತ್ ಇಲಾಖೆಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಸಾವಿರಾರು ಯುವಕ-ಯುವತಿಯರಿಗೆ ಭರವಸೆ ನೀಡಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ನಿರ್ದೇಶನದ ಮೇರೆಗೆ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿತ್ತು. 2024ರ ಅಕ್ಟೋಬರ್‌ನಲ್ಲಿ ಕೆಪಿಟಿಸಿಎಲ್ ಒಟ್ಟು 523 ನಿರ್ವಹಣಾ ಪದವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ 433 ಕಿರಿಯ ಸ್ಟೇಷನ್ ಪರಿಚಾರಕ ಮತ್ತು 90 ಕಿರಿಯ ಪವರ್‌ಮ್ಯಾನ್ ಹುದ್ದೆಗಳು ಸೇರಿದ್ದವು. ಈ ಹುದ್ದೆಗಳ ನೇಮಕಾತಿಗಾಗಿ ಮೇ 2025ರಲ್ಲಿ ರಾಜ್ಯದ ವಿವಿಧೆಡೆ ಸಹನ ಶಕ್ತಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸುಮಾರು 2600ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಸಹನ ಶಕ್ತಿ ಪರೀಕ್ಷೆ ನಡೆದ ಕೇವಲ ಎರಡು ತಿಂಗಳಲ್ಲೇ ನಿಗಮವು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಬಿಡುಗಡೆ ಮಾಡಿತ್ತು. ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಅಂತಿಮ ಆಯ್ಕೆ ಪಟ್ಟಿಯನ್ನು ಆಗಸ್ಟ್ 2025ರಲ್ಲಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಅಂತಿಮ ಪಟ್ಟಿಯು ನಿಗಮದ ಪಾರದರ್ಶಕ ಮತ್ತು ತ್ವರಿತ ನೇಮಕಾತಿ ಪ್ರಕ್ರಿಯೆಗೆ ಸಾಕ್ಷಿಯಾಗಿದೆ.

ಆಯ್ಕೆ ಪಟ್ಟಿಯನ್ನು ಕವಿಪ್ರನಿನಿಯ ಅಧಿಕೃತ ವೆಬ್‌ಸೈಟ್ ಆದ htpps://kptcl.karnataka.gov.in/recruitment ನಲ್ಲಿ ವೀಕ್ಷಿಸಬಹುದಾಗಿದೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಇದು ಒಂದು ದೊಡ್ಡ ಗೆಲುವು ಎಂದು ಪರಿಗಣಿಸಲಾಗಿದೆ.
ಉಳಿದಂತೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಮತ್ತು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಸೇರಿದಂತೆ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿನ ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ. ಈ ಕಂಪನಿಗಳ ಆಯ್ಕೆ ಪಟ್ಟಿಗಳನ್ನು ಸಹ ಶೀಘ್ರದಲ್ಲಿಯೇ ಪ್ರಕಟಿಸುವ ಭರವಸೆಯನ್ನು ಇಂಧನ ಇಲಾಖೆ ನೀಡಿದೆ.






















