ಬೆಂಗಳೂರು, ಆ.29 www.bengaluruwire.com : ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್‌ಟಿ ಸರಳೀಕರಣದಿಂದಾಗಿ ರಾಜ್ಯಗಳಿಗೆ ₹2.5 ಲಕ್ಷ ಕೋಟಿ ವರೆಗೆ ಆದಾಯ ನಷ್ಟವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 8 ಸಮಾನ ಮನಸ್ಕ ರಾಜ್ಯಗಳ ಸಚಿವರ ಸಭೆ ನಡೆಸಿದ ಬಳಿಕ, ಜಿಎಸ್‌ಟಿ ವ್ಯವಸ್ಥೆ ಸ್ಥಿರಗೊಳ್ಳುವವರೆಗೂ ನಷ್ಟ ಪರಿಹಾರವನ್ನು ಜಿಎಸ್‌ಟಿ ಕೌನ್ಸಿಲ್‌ನಿಂದಲೇ ಒದಗಿಸುವಂತೆ ಅವರು ಒತ್ತಾಯಿಸಿದರು.
ಕೇಂದ್ರದ ಜಿಎಸ್‌ಟಿ ಸರಳೀಕರಣದ ಪ್ರಸ್ತಾವನೆಯನ್ನು ಸ್ವಾಗತಿಸಿದರೂ, ಈ ಕ್ರಮದಿಂದ ರಾಜ್ಯಗಳ ತೆರಿಗೆ ಆದಾಯಕ್ಕೆ ಧಕ್ಕೆಯಾಗಬಾರದು ಎಂದು ಸಚಿವರು ಅಭಿಪ್ರಾಯಪಟ್ಟರು. ಇದರ ಸಂಪೂರ್ಣ ಲಾಭ ಕೆಲವು ಕಂಪನಿಗಳಿಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರಿಗೂ ತಲುಪಬೇಕು ಎಂದು ಅವರು ಒತ್ತಿ ಹೇಳಿದರು.
ಬೃಹತ್ ಆದಾಯ ನಷ್ಟದ ಅಂದಾಜು :

ಕೇಂದ್ರ ಸರ್ಕಾರ ಆದಾಯ ನಷ್ಟದ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ, ಕೆಲವು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಅಂದಾಜಿಸಿರುವಂತೆ, ರಾಜ್ಯಗಳಿಗೆ ₹85 ಸಾವಿರ ಕೋಟಿಯಿಂದ ₹2.5 ಲಕ್ಷ ಕೋಟಿ ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ನಷ್ಟ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ದೊಡ್ಡ ಪೆಟ್ಟು ನೀಡಲಿದೆ ಎಂದು ಬೈರೇಗೌಡ ಎಚ್ಚರಿಸಿದರು.
“ಕೇಂದ್ರದ ಆದಾಯದಲ್ಲಿ ಜಿಎಸ್‌ಟಿ ಪಾಲು ಕೇವಲ ಶೇ. 28ರಷ್ಟಿದ್ದರೆ, ರಾಜ್ಯಗಳ ಆದಾಯದಲ್ಲಿ ಅದರ ಪಾಲು ಶೇ. 50ರಷ್ಟಿದೆ. ಅಭಿವೃದ್ಧಿ ಹಾಗೂ ಆದಾಯ ಸಂಗ್ರಹಣೆಗಾಗಿ ರಾಜ್ಯಗಳು ಜಿಎಸ್‌ಟಿಯನ್ನೇ ಹೆಚ್ಚು ಅವಲಂಬಿಸಿವೆ. ಈ ಸಂದರ್ಭದಲ್ಲಿ ಆದಾಯದ ಶೇ. 20ರಷ್ಟು ನಷ್ಟವಾದರೆ, ರಾಜ್ಯಗಳು ತಮ್ಮ ಅಭಿವೃದ್ಧಿ ಯೋಜನೆಗಳನ್ನು ಹೇಗೆ ಮುಂದುವರಿಸುತ್ತವೆ?” ಎಂದು ಅವರು ಪ್ರಶ್ನಿಸಿದರು.

‘ಜಿಎಸ್‌ಟಿ ಪರಿಹಾರ ಮತ್ತೆ ಜಾರಿಯಾಗಲಿ’ :
ಜಿಎಸ್‌ಟಿ ಜಾರಿಯಾದಾಗ, ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ (2017-2022) ರಾಜ್ಯಗಳ ಆದಾಯ ನಷ್ಟಕ್ಕೆ ಪರಿಹಾರ ನೀಡುವುದಾಗಿ ಹೇಳಿತ್ತು. ಆದರೆ 2022ರ ಬಳಿಕ ಈ ವ್ಯವಸ್ಥೆಯನ್ನು ನಿಲ್ಲಿಸಲಾಯಿತು.
ಪರಿಣಾಮವಾಗಿ, ಅನೇಕ ರಾಜ್ಯಗಳು ಶೇ. 25ರಷ್ಟು ಆದಾಯ ನಷ್ಟವನ್ನು ಎದುರಿಸಿದವು. ಜಿಎಸ್‌ಟಿ ವ್ಯವಸ್ಥೆ ಇನ್ನೂ ಸ್ಥಿರಗೊಂಡಿಲ್ಲ, ಆದ್ದರಿಂದ ಸರಳೀಕರಣದ ನಂತರವೂ ಆದಾಯ ನಷ್ಟವಾದರೆ ಪರಿಹಾರವನ್ನು ಮತ್ತೆ ಜಾರಿಗೊಳಿಸಬೇಕು ಎಂದು ಸಚಿವರು ಒತ್ತಾಯಿಸಿದರು.
“ಸಹಕಾರಿ ಒಕ್ಕೂಟ ವ್ಯವಸ್ಥೆ ಕೇವಲ ಮಾತಿನಲ್ಲಿ ಮಾತ್ರ ಇರಬಾರದು, ಅದು ಕಾರ್ಯರೂಪದಲ್ಲೂ ಇರಬೇಕು. ರಾಜ್ಯಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾಗ ಮಾತ್ರ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಇಲ್ಲವಾದರೆ, ಸಣ್ಣ ಪುಟ್ಟ ಅವಶ್ಯಕತೆಗಳಿಗೂ ಕೇಂದ್ರದ ಮೇಲೆ ಅವಲಂಬಿತವಾಗಬೇಕಾಗುತ್ತದೆ, ಇದು ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ” ಎಂದು ಅವರು ತಿಳಿಸಿದರು.
ಈ ಮಹತ್ವದ ಸಭೆಯಲ್ಲಿ ತಮಿಳುನಾಡು, ಹಿಮಾಚಲ ಪ್ರದೇಶ, ಜಾರ್ಖಂಡ್, ಪಂಜಾಬ್, ಕೇರಳ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿ, ಈ ವಿಷಯದ ಗಂಭೀರತೆಯ ಬಗ್ಗೆ ಚರ್ಚಿಸಿದರು.






















