ಬೆಂಗಳೂರು, ಆ.29 www.bengaluruwire.com : ನಗರಾಭಿವೃದ್ಧಿಯ ಹೊಸ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಹೊಸ ನಗರ ಪಾಲಿಕೆಗಳಲ್ಲಿ ಪ್ರತಿ ಪಾಲಿಕೆಗಳಿಗೆ ಎರಡು ವಲಯಗಳಂತೆ ಒಟ್ಟು 10 ವಲಯಗಳಿಗೆ ತಾತ್ಕಾಲಿಕ ಕಚೇರಿಗಳನ್ನು ಗುರುತಿಸಿದೆ.
ಈ ಸಂಬಂಧ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಇಂದು (ಆಗಸ್ಟ್ 29)ರಂದು ಅಧಿಕೃತ ಕಚೇರಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಜಿಬಿಎ ಪ್ರಧಾನ ಕಚೇರಿಯು ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ ನಗರಪಾಲಿಕೆಯ ವಲಯ ಕಚೇರಿ ಕಾರ್ಯನಿರ್ವಹಣೆಗೆ ಈಗಿರುವ ಬಿಬಿಎಂಪಿ ಕಚೇರಿಗಳನ್ನೇ ತಾತ್ಕಾಲಿಕವಾಗಿ ಬಳಸಲಾಗುತ್ತದೆ. ಇದಕ್ಕೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ನಗರಾಭಿವೃದ್ಧಿ, ಸಾರ್ವಜನಿಕ ಸೇವೆಗಳ ಸುಧಾರಣೆ ಹಾಗೂ ಆಡಳಿತದ ಸುಗಮವಾಗಿ ಸಾಗಲು ಈ ಹೊಸ ವ್ಯವಸ್ಥೆಯ ಉದ್ದೇಶವಾಗಿದೆ. ಈ ಕ್ರಮದಿಂದ ನಗರದ ವಿವಿಧ ಭಾಗಗಳಲ್ಲಿ ಸಮನ್ವಯದ ಅಭಿವೃದ್ಧಿಗೆ ದಾರಿ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.























