ಬೆಂಗಳೂರು, ಆ.26 www.bengaluruwire.com : ನಗರಾಭಿವೃದ್ಧಿ ಇಲಾಖೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಆಗಸ್ಟ್ 26ರ ಈ ಅಧಿಸೂಚನೆಯು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ರ ಅನ್ವಯ ರಚನೆಯಾಗಿದೆ.
ಈ ಪ್ರಾಧಿಕಾರವು 75 ಸದಸ್ಯರನ್ನು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ, ಮತ್ತು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಉಪಾಧ್ಯಕ್ಷರಾಗಿರುತ್ತಾರೆ.
ಪ್ರಾಧಿಕಾರದ ಸದಸ್ಯರಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ವ್ಯಾಪ್ತಿಯ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್, ಪಿ.ಸಿ. ಮೋಹನ್, ಮತ್ತು ತೇಜಸ್ವಿ ಸೂರ್ಯ, ಹಾಗೂ ರಾಜ್ಯ ಸಭಾ ಸದಸ್ಯರು ಸೇರಿದ್ದಾರೆ.
ಇದರ ಜೊತೆಗೆ, ಹಲವು ಸಚಿವರು, ಬೆಂಗಳೂರು ವ್ಯಾಪ್ತಿಯ ಶಾಸಕರು, ಹಾಗೂ ವಿಧಾನ ಪರಿಷತ್ ಸದಸ್ಯರು, ಐದು ಪಾಲಿಕೆ ಸದಸ್ಯರಿಂದ ಆಯ್ಕೆಯಾಗುವ ಮೇಯರ್‌ಗಳು, ಆಯುಕ್ತರುಗಳು ಸಹ ಪ್ರಾಧಿಕಾರದ ಭಾಗವಾಗಿದ್ದಾರೆ. ಬಿಡಿಎ, ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ ಬಿ, ಬೆಂಗಳೂರು ನಗರ ಪೊಲೀಸ್ ಮತ್ತು ಇತರ ಇಲಾಖೆಗಳ ಮುಖ್ಯಸ್ಥರು ಕೂಡ ಪ್ರಾಧಿಕಾರದಲ್ಲಿ ಸ್ಥಾನ ಪಡೆದಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ಅವರು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಈ ಹೊಸ ಪ್ರಾಧಿಕಾರದ ರಚನೆಯು ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಸೆಪ್ಟೆಂಬರ್ 2 ರಂದು ರಾಜ್ಯ ಸರ್ಕಾರವು 5 ಹೊಸ ನಗರ ಪಾಲಿಕೆಗಳ ಕುರಿತು ಅಂತಿಮ ಅಧಿಸೂಚನೆ ಹೊರಡಿಸಲಿದ್ದು, ಆನಂತರ 18 ವರ್ಷಗಳ ಇತಿಹಾಸ ಹೊಂದಿದ್ದ ಬಿಬಿಎಂಪಿ ಶಾಶ್ವತವಾಗಿ ಕಣ್ಮರೆಯಾಗಲಿದೆ.
ಪ್ರಾಧಿಕಾರದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗಾಗಿ ಬಿಬಿಎಂಪಿ ಕೇಂದ್ರ ಕಚೇರಿಯ ಮೇಯರ್ ಮತ್ತು ಉಪಮೇಯರ್ ಕೊಠಡಿಗಳನ್ನು ನವೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ವ್ಯಾಪ್ತಿ ನಗರ ಪಾಲಿಕೆಗಳಿಷ್ಟೇ ಸೀಮಿತವಾಗುವುದಿಲ್ಲ. ಸರ್ಕಾರ ‘ಗ್ರೇಟರ್ ಬೆಂಗಳೂರು ಪ್ರದೇಶ’ವನ್ನು ಎಷ್ಟು ವಿಸ್ತರಿಸುತ್ತದೆಯೋ ಅಲ್ಲಿಯವರೆಗೂ ಜಿಬಿಎ ಅಧಿಕಾರ ವ್ಯಾಪ್ತಿಯನ್ನು ಹೊಂದಲಿದೆ. ಹೊಸ ನಗರ ಪಾಲಿಕೆಗಳೂ ಸೇರಿದಂತೆ ತನ್ನ ವ್ಯಾಪ್ತಿಯ ಎಲ್ಲ ಪ್ರದೇಶಗಳ ಅಭಿವೃದ್ಧಿಯ ನೇತೃತ್ವವನ್ನು ಜಿಬಿಎ ವಹಿಸಲಿದೆ. ಮೂಲಸೌಕರ್ಯಗಳು ಸೇರಿದಂತೆ ಬೃಹತ್ ಯೋಜನೆಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆಯೂ ಜಿಬಿಎ ಅಧಿಕಾರ ವ್ಯಾಪ್ತಿಗೆ ಬರಲಿದೆ.






















