ನವದೆಹಲಿ, ಆ.26 www.bengaluruwire.com : ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಪ್ರಮುಖ ಘೋಷಣೆಯನ್ನು ಹಣಕಾಸು ಸಚಿವಾಲಯ ಮಾಡಿದೆ. ಈಗಾಗಲೇ ಏಕೀಕೃತ ಪಿಂಚಣಿ ವ್ಯವಸ್ಥೆ (ಯುಪಿಎಸ್) ಅಡಿಯಲ್ಲಿರುವ ನೌಕರರು, ಇನ್ಮುಂದೆ ಮತ್ತೆ ಹಳೆಯ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಗೆ ಮರಳಲು ಒಂದು ಬಾರಿ ಅವಕಾಶ ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗ ಹೊರಡಿಸಿರುವ ಕಚೇರಿ ಜ್ಞಾಪಕ ಪತ್ರದಲ್ಲಿ (ಆಫೀಸ್ ಮೆಮೋರಾಂಡಮ್) ಈ ಬಗ್ಗೆ ಮಾಹಿತಿ ನೀಡಲಾಗಿದೆ. ಯುಪಿಎಸ್ ಅನ್ನು ಆಯ್ಕೆ ಮಾಡಿಕೊಂಡಿದ್ದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಈ ಒಂದು ಬಾರಿಯ, ಏಕಮುಖ ಬದಲಾವಣೆಗೆ ಅವಕಾಶವಿದೆ.
ಷರತ್ತುಗಳು ಅನ್ವಯ :
* ನಿವೃತ್ತಿ ಅಥವಾ ಹುದ್ದೆಯಿಂದ ನಿವೃತ್ತಿಯೆಂದು ಪರಿಗಣಿಸುವ ದಿನಾಂಕದ ಮೂರು ತಿಂಗಳ ಮುನ್ನ, ಈ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

* ಒಮ್ಮೆ ಈ ಆಯ್ಕೆ ಮಾಡಿಕೊಂಡರೆ, ಸರ್ಕಾರವು ಹೆಚ್ಚುವರಿ ಕೊಡುಗೆಯಾಗಿ ನೀಡಿದ್ದ ಶೇ. 4 ರಷ್ಟು ಮೊತ್ತವು ನೌಕರನ ಖಾತೆಗೆ ಜಮಾ ಆಗಲಿದೆ.
* ಒಂದು ವೇಳೆ ಈ ಒಂದು ಬಾರಿಯ ಅವಕಾಶವನ್ನು ನೌಕರರು ಬಳಸಿಕೊಳ್ಳದಿದ್ದರೆ, ಅವರು ಯುಪಿಎಸ್ ನಲ್ಲೇ ಮುಂದುವರಿಯಬೇಕು.
* ಶಿಸ್ತು ಕ್ರಮಗಳನ್ನು ಎದುರಿಸುತ್ತಿರುವ ನೌಕರರಿಗೆ ಈ ಸೌಲಭ್ಯ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.






















