ಬೆಂಗಳೂರು, ಆ.25 www.bengaluruwire.com : ಬಿಎಂಟಿಸಿ ಬಸ್ಸನ್ನು ಮೂವರು ಇದ್ದ ದ್ವಿಚಕ್ರ ವಾಹನ ಎಡಬದಿಯಿಂದ ಓವರ್ ಟೇಕ್ ಮಾಡಲು ಹೋಗಿ, ವಾಹನ ಸ್ಕಿಡ್ ಆಗಿ ಜಾರಿಬಿದ್ದು ಬಾಲಕನೊಬ್ಬ ಬಸ್ಸಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೆ.ಆರ್.ಮಾರುಕಟ್ಟೆ ಜಾಮೀ ಮಸೀದಿ ಬಳಿ ಇಂದು ಸಂಜೆ ನಡೆದಿದೆ.
ಸೋಮವಾರ ಸಂಜೆ 5.45ಕ್ಕೆ ಹುತ್ತನಹಳ್ಳಿಯ KA–57–F–6496 ಸಂಖ್ಯೆಯ ಬಿಎಂಟಿಸಿ ಬಸ್ ಕೆ.ಆರ್.ಮಾರುಕಟ್ಟೆಯಿಂದ ತೆರಳುತ್ತಿದ್ದಾಗ ಬಸ್‌ನ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿ ಮಧ್ಯದಲ್ಲಿ 11 ವರ್ಷದ ಬಾಲಕ ಸೇರಿ ಮೂವರು ಸವಾರರು ಒಂದೇ ಸ್ಕೂಟರಿನಲ್ಲಿ ಚಲಿಸುತ್ತಿದ್ದು, ಬಸ್ಸಿನ ಎಡ ಭಾಗದಲ್ಲಿ ಓವರ್ ಟೇಕ್ ಮಾಡಲು ಹೋದಾಗ ಮುಂದೆ ಇದ್ದ ಟೂ ವೀಲರ್ ಗಮನಿಸಿ ಬ್ರೇಕ್ ಹಿಡಿದು ಸ್ಕಿಡ್ ಆಗಿ ನೆಲಕ್ಕುರುಳಿದರು. ಆ ಸಂದರ್ಭದಲ್ಲಿ ಬಸ್ಸಿನ ಎಡಬಾಗದ ಹಿಂಬದಿಯ ಚಕ್ರಕ್ಕೆ ಬಾಲಕ ಸಿಲುಕಿ ತೀವ್ರ ಗಾಯಗೊಂಡ. ತಕ್ಷಣವೇ ಆ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆ ಹುಡುಗ ಮೃತಪಟ್ಟಿದ್ದಾನೆ.
ಈ ಕುರಿತಂತೆ ಬಿಎಂಟಿಸಿ ಅಧಿಕಾರಿಗಳು ದುರ್ಘಟನೆ ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಇದರಲ್ಲಿ ಸಂಸ್ಥೆಯ ಚಾಲಕರ ತಪ್ಪು ಕಂಡು ಬಂದಿರುವುದಿಲ್ಲ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ.
ವಾಹನವನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದು, ಘಟನೆಯ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಉತ್ತರ ವಲಯದ ವಿಭಾಗ ನಿಯಂತ್ರಣ ಅಧಿಕಾರಿಗಳು ಹಾಗೂ ಅಪಘಾತ ಶಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರ್ಘಟನೆಯ ಕುರಿತು ಬಿಎಂಟಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಇತ್ತೀಚೆಗೆ ನಗರದಲ್ಲಿ ವಿವಿಧ ಕಾರಣಗಳಿಂದಾಗಿ ಬಿಎಂಟಿಸಿ ಬಸ್ ಅಪಘಾತಗಳಿಂದ ಸಾರ್ವಜನಿಕರು ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ನಾಗರೀಕರಿಂದ ಸಾರಿಗೆ ಸಂಸ್ಥೆಯ ಚಾಲಕರ ಚಾಲನೆಯ ಬಗ್ಗೆ ಸಾಕಷ್ಟು ದೂರು ಹಾಗೂ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ.
ಈ ಹಿನ್ನಲೆಯಲ್ಲಿ ಬಿಎಂಟಿಸಿ ಸಂಸ್ಥೆಯು, ಪ್ರತಿದಿನ ಚಾಲಕ ನಿರ್ವಾಹಕರ ಕರ್ತವ್ಯದ ಪ್ರಾರಂಭದ ವೇಳೆಯಲ್ಲಿಯೇ ಸಂಬಂಧಪಟ್ಟ ಘಟಕದ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಾಲಕ ನಿರ್ವಾಹಕರಿಗೆ ಸುರಕ್ಷತಾ ಚಾಲನೆ, ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ, ಹಾಗೂ ಅಪಘಾತದಿಂದ ಆಗುವ ದುಷ್ಪರಿಣಾಮಗಳು ಬಗ್ಗೆ ವಿವರವಾಗಿ ಮನದಟ್ಟು ಮಾಡಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದೆ.






















