ಬೆಂಗಳೂರು, ಆ.24 www.bengaluruwire.com : ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ನ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ನಿನ್ನೆ (ಆಗಸ್ಟ್ 24) ಬಿಡುಗಡೆಯಾಗಿ ದಾಖಲೆ ಸೃಷ್ಟಿಸಿದೆ. ಆಗಸ್ಟ್ 15ರಂದು ಬಿಡುಗಡೆಯಾಗಬೇಕಿದ್ದ ಈ ಹಾಡು, ದರ್ಶನ್ ಅವರಿಗೆ ಜೈಲುವಾಸವಾದ ಕಾರಣ, ಮುಂದೂಡಲಾಗಿತ್ತು. ಸದ್ಯ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿದೆ.
ಹಾಡು ಬಿಡುಗಡೆಯಾದ ಕೇವಲ 54 ನಿಮಿಷಗಳಲ್ಲಿ 7.38 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, 1.80 ಲಕ್ಷಕ್ಕೂ ಅಧಿಕ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರಿಗೆ ಜಾಮೀನು ಸಿಕ್ಕರೂ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿದ್ದರಿಂದ ಅವರು ಮತ್ತೊಮ್ಮೆ ಜೈಲು ಸೇರಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿಯೂ ಅಭಿಮಾನಿಗಳು ದರ್ಶನ್ ಮೇಲಿನ ತಮ್ಮ ಪ್ರೀತಿಯನ್ನು ಈ ಹಾಡಿನ ಮೂಲಕ ಪ್ರದರ್ಶಿಸಿದ್ದಾರೆ.

ಹೊಸ ದಾಖಲೆ ಸೃಷ್ಟಿಸಿದ ದಚ್ಚು ಹಾಡು:
ಈ ಹಾಡು ಕನ್ನಡ ಚಲನಚಿತ್ರೋದ್ಯಮದಲ್ಲಿ ಹೊಸ ದಾಖಲೆ ಬರೆದಿದೆ. ಅಭಿಮಾನಿಯೊಬ್ಬರ ಪ್ರತಿಕ್ರಿಯೆ ಪ್ರಕಾರ, ಕನ್ನಡದ ಹಾಡುಗಳಲ್ಲಿ ಅತಿ ವೇಗವಾಗಿ ಒಂದು ಲಕ್ಷ ಲೈಕ್‌ಗಳನ್ನು ಪಡೆದ ಮೊದಲ ಹಾಡು ಇದು. ಕೇವಲ 20 ನಿಮಿಷಗಳಲ್ಲಿ ಈ ಹಾಡು ಒಂದು ಲಕ್ಷ ಲೈಕ್ ಗಳಿಸಿದರೆ, ಈ ಹಿಂದೆ ಯಶ್ ಅವರ ‘ತೂಫಾನ್’ (34 ನಿಮಿಷಗಳು) ಮತ್ತು ದರ್ಶನ್ ಅವರ ‘ಧರಣಿ’ (44 ನಿಮಿಷಗಳು) ಹಾಡುಗಳ ದಾಖಲೆಯನ್ನು ಮುರಿದಿದೆ. ಈ ಮೂಲಕ ದಚ್ಚು ಅಭಿಮಾನಿಗಳ ಹುಚ್ಚುತನ ಮತ್ತೊಮ್ಮೆ ಸಾಬೀತಾಗಿದೆ.

ದಿ ಡೆವಿಲ್ ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶಿಸಿದ್ದು, ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಒಂದು ಕಡೆ ದರ್ಶನ್ ಅವರ ಅಭಿಮಾನಿಗಳಿಗೆ ಈ ಹಾಡು ಥ್ರಿಲ್ ಕೊಟ್ಟಿದ್ದರೆ, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತೆ ಜೈಲು ಪಾಲಾಗಿರುವುದು ಅವರಿಗೆ ಬೇಸರ ತಂದಿದೆ. ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂಬ ಸುಪ್ರೀಂ ಕೋರ್ಟ್‌ನ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಹಾಡಿನ ತಂಡ:
* ಹಾಡಿನ ಹೆಸರು: ಇದ್ರೆ ನೆಮ್ಮದಿಯಾಗ್ ಇರ್ಬೇಕು
* ಸಂಗೀತ: ಬಿ. ಅಜನೀಶ್ ಲೋಕನಾಥ್
* ಗಾಯನ: ದೀಪಕ್ ಬ್ಲೂ
* ಸಾಹಿತ್ಯ: ಅನಿರುದ್ಧ ಶಾಸ್ತ್ರಿ






















