ಬೆಂಗಳೂರು, ಆ.23 www.bengaluruwire.com : ನೋಟು ನಿಷೇಧವಾದ 2016ರ ಸಮಯದಲ್ಲಿ ದೇಶದ ನಗರ ಆರ್ಥಿಕತೆ ಕುಸಿದಿದ್ದಾಗ, ಗ್ರಾಮೀಣ ಭಾರತದ ಆರ್ಥಿಕತೆಯನ್ನು ಉಳಿಸಿದ್ದು ಸಹಕಾರಿ ತತ್ವಗಳು ಮತ್ತು ಸಹಕಾರಿ ಚಳುವಳಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಪತ್ರಕರ್ತರ ಸಹಕಾರ ಸಂಘದ 75ನೇ ವರ್ಷಾಚರಣೆಯ ‘ಅಮೃತ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯ ಚಳುವಳಿಯ ಜೊತೆಜೊತೆಗೇ ಸಹಕಾರ ಚಳುವಳಿಯೂ ಸಾಗಿ ಬಂದಿದೆ. ಪತ್ರಕರ್ತರ ಸಹಕಾರ ಸಂಘವು ಇದೇ ಸಹಕಾರಿ ಚಳುವಳಿಯ ಭಾಗವಾಗಿ ಹುಟ್ಟಿಕೊಂಡಿದೆ ಎಂದು ಅವರು ಹೇಳಿದರು.
ಪರಸ್ಪರ ಸಹಕಾರವೇ ಯಶಸ್ಸಿನ ಮೂಲ :
ಪತ್ರಕರ್ತರು ಮತ್ತು ಪತ್ರಿಕಾ ಕಾರ್ಮಿಕರಿಗೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಕಷ್ಟ. ಇಂತಹ ಸಂದರ್ಭದಲ್ಲಿ, ಪರಸ್ಪರ ಜಾಮೀನು ನೀಡುವ ಮೂಲಕ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವುದು ಸಹಕಾರಿ ಸಂಘಗಳ ಯಶಸ್ಸಿಗೆ ಕಾರಣವಾಗಿದೆ. ಈ ‘ಪರಸ್ಪರತೆ’ಯ ಮೌಲ್ಯವನ್ನು ಕಾಪಾಡಿಕೊಂಡು ಹೋಗಬೇಕು ಎಂದು ಅವರು ಸದಸ್ಯರಿಗೆ ಮನವಿ ಮಾಡಿದರು.

ಅಲ್ಪ ಬಂಡವಾಳದಿಂದ ಕೋಟಿಗಟ್ಟಲೆ ವಹಿವಾಟು ತನಕ ಬೆಳವಣಿಗೆ :
1949ರಲ್ಲಿ ಕೇವಲ ₹353.12 ದುಡಿಯುವ ಬಂಡವಾಳದೊಂದಿಗೆ ಆರಂಭವಾದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು ಈಗ ₹10 ಕೋಟಿಗೂ ಅಧಿಕ ಬಂಡವಾಳ ಹೊಂದಿದೆ. ನಿರಂತರವಾಗಿ ಲಾಭ ಗಳಿಸುತ್ತಿರುವ ಈ ಸಂಘವು ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿ ಪಡೆದಿದೆ.
ಸಂಘವು ತನ್ನ ಸದಸ್ಯರಿಗೆ ಮನೆ ಮತ್ತು ನಿವೇಶನ ಖರೀದಿಸಲು ₹30 ಲಕ್ಷದವರೆಗೆ ಸಾಲ, ₹3 ಲಕ್ಷದವರೆಗೆ ವೈಯಕ್ತಿಕ ಸಾಲ, ₹25 ಸಾವಿರ ವೈದ್ಯಕೀಯ ನೆರವು ಮತ್ತು ₹2 ಲಕ್ಷ ಅಪಘಾತ ವಿಮೆ ಸೌಲಭ್ಯ ಒದಗಿಸುತ್ತಿದೆ. ಜೊತೆಗೆ, ಪ್ರತಿ ವರ್ಷ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದೆ ಎಂದು ಪ್ರಭಾಕರ್ ಶ್ಲಾಘಿಸಿದರು.
ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ಕಾರ್ಯದರ್ಶಿ ರಮೇಶ್ ಹಿರೇಜಂಬೂರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






















