ನವದೆಹಲಿ, ಆ.22 www.bengaluruwire.com : ‘ಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ ₹50’ ಎಂಬ ಆಕರ್ಷಕ ಆಫರ್ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ರಾಪಿಡೋ (Rapido) ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ ₹10 ಲಕ್ಷ ದಂಡ ವಿಧಿಸಿ ಕಠಿಣ ಕ್ರಮ ಕೈಗೊಂಡಿದೆ. ಇಂತಹ ದಾರಿತಪ್ಪಿಸುವ ಜಾಹೀರಾತು ನೀಡುವ ಸಂಸ್ಥೆಗಳಿಗೆ ಇದು ಸ್ಪಷ್ಟ ಎಚ್ಚರಿಕೆಯಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಅವರು, ರಾಪಿಡೋ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಮೂಲಕ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ, ಕಾರ್ಯಾಚರಣೆಗೆ ಇಳಿದ ಸಿ.ಸಿ.ಪಿ.ಎ. ಸಂಸ್ಥೆಯು ಪರಿಶೀಲನೆ ನಡೆಸಿ ದಂಡ ವಿಧಿಸಿದೆ. ಅಲ್ಲದೆ, ತಕ್ಷಣದಿಂದಲೇ ಈ ದಾರಿತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಆದೇಶಿಸಿದೆ.
ಗ್ರಾಹಕರ ಹಕ್ಕುಗಳ ರಕ್ಷಣೆಗೆ ಮುಂದಾಗಿರುವ ಸಿ.ಸಿ.ಪಿ.ಎ., ರಾಪಿಡೋ ಸಂಸ್ಥೆಯ ಜಾಹೀರಾತು ವಂಚನೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ಗಮನಿಸಿದೆ. ‘5 ನಿಮಿಷದಲ್ಲಿ ಆಟೋ ಸೇವೆ ಅಥವಾ ₹50 ಪಡೆಯಿರಿ’ ಹಾಗೂ ‘ಗ್ಯಾರಂಟಿ ಆಟೋ’ ಎಂಬ ಭರವಸೆಗಳನ್ನು ನೀಡುತ್ತಿದ್ದ ಈ ಜಾಹೀರಾತುಗಳು ವಾಸ್ತವಕ್ಕೆ ದೂರವಾಗಿದ್ದವು. ಈ ಜಾಹೀರಾತುಗಳು ಗ್ರಾಹಕರನ್ನು ದಾರಿತಪ್ಪಿಸಿ ಮೋಸಗೊಳಿಸುತ್ತಿರುವುದನ್ನು ಪ್ರಾಧಿಕಾರ ಖಚಿತಪಡಿಸಿಕೊಂಡಿದೆ.
ಷರತ್ತುಗಳು ಅನ್ವಯ ಎಂಬುದು ಸೂಕ್ಷ್ಮ ಅಕ್ಷರದಲ್ಲಿ :

ಸಿ.ಸಿ.ಪಿ.ಎ. ನಡೆಸಿದ ತನಿಖೆಯಲ್ಲಿ, ರಾಪಿಡೋ ಜಾಹೀರಾತುಗಳಲ್ಲಿ ‘ಷರತ್ತುಗಳು ಅನ್ವಯ’ ಎಂಬುದು ಓದಲಾಗದಷ್ಟು ಚಿಕ್ಕ ಗಾತ್ರದ ಅಕ್ಷರಗಳಲ್ಲಿ ಇರುವುದು ಪತ್ತೆಯಾಗಿದೆ. ಅಲ್ಲದೆ, ಭರವಸೆ ನೀಡಿದಂತೆ ₹50 ಮೊತ್ತವೂ ಸಿಗುತ್ತಿರಲಿಲ್ಲ. ಬದಲಿಗೆ, ಕೇವಲ 7 ದಿನಗಳ ಮಾನ್ಯತೆ ಹೊಂದಿರುವ ‘ರಾಪಿಡೋ ನಾಣ್ಯಗಳು’ (Rapido Coins) ರೂಪದಲ್ಲಿ ಹಣ ನೀಡಲಾಗುತ್ತಿತ್ತು. ಇದು ಮಾತ್ರವಲ್ಲದೆ, ಈ ಆಫರ್ ಅನ್ನು ‘ವೈಯಕ್ತಿಕ ಕ್ಯಾಪ್ಟನ್‌ಗಳು ನೀಡುತ್ತಿದ್ದಾರೆಯೇ ಹೊರತು ರಾಪಿಡೋ ಅಲ್ಲ’ ಎಂದು ಹೇಳಿ ಕಂಪನಿ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿತ್ತು.
ರಾಪಿಡೋ ವಿರುದ್ಧ 1799 ದೂರುಗಳು :
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಪ್ರಕಾರ, ರಾಪಿಡೋ ಸಂಸ್ಥೆಯ ವಿರುದ್ಧ 2023ರ ಏಪ್ರಿಲ್‌ನಿಂದ 2025ರ ಜುಲೈ ವರೆಗೆ ಒಟ್ಟು 1,799 ದೂರುಗಳು ದಾಖಲಾಗಿವೆ. ಈ ದೂರುಗಳು ಸೇವಾ ನ್ಯೂನತೆ, ಹಣ ಮರುಪಾವತಿ ಮಾಡದಿರುವುದು, ಅಧಿಕ ಶುಲ್ಕ ವಿಧಿಸುವುದು, ಮತ್ತು ಭರವಸೆ ನೀಡಿದಂತೆ ಸೇವೆ ಒದಗಿಸುವಲ್ಲಿ ವಿಫಲವಾಗಿರುವ ಬಗ್ಗೆ ಇವೆ. ಸಂಸ್ಥೆಯ ಗಮನಕ್ಕೆ ತಂದರೂ ರಾಪಿಡೋ ಈ ದೂರುಗಳನ್ನು ಕಡೆಗಣಿಸಿತ್ತು.
ಗ್ರಾಹಕರಿಗೆ ಸಿ.ಸಿ.ಪಿ.ಎ. ಸಲಹೆ :
ದೊಡ್ಡ ದೊಡ್ಡ ಭರವಸೆಗಳನ್ನು ನೀಡುವ ಅಥವಾ ಷರತ್ತುಗಳನ್ನು ಸ್ಪಷ್ಟಪಡಿಸದೆ ‘ಖಾತರಿ’ ಅಥವಾ ‘ಖಚಿತ’ದಂತಹ ನುಡಿಗಟ್ಟು ಬಳಸುವ ಜಾಹೀರಾತುಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು ಎಂದು ಸಿ.ಸಿ.ಪಿ.ಎ. ಸಲಹೆ ನೀಡಿದೆ. ಮೋಸದ ಜಾಹೀರಾತುಗಳಿಂದ ತೊಂದರೆ ಎದುರಿಸಿದಲ್ಲಿ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ಗೆ ಕರೆ ಮಾಡಿ ದೂರು ಸಲ್ಲಿಸಲು ಅಥವಾ ಎನ್.ಸಿ.ಎಚ್ ವೆಬ್‌ಸೈಟ್ ಮೂಲಕ ದೂರು ಸಲ್ಲಿಸಲು ಸೂಚಿಸಿದೆ.
ಕೇಂದ್ರ ಸಚಿವರ ಹೇಳಿಕೆ:
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಅವರು, “ರಾಪಿಡೋ ಖಾಸಗಿ ಸಾರಿಗೆ ಸಂಸ್ಥೆ ದೇಶದ 120ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 18 ತಿಂಗಳುಗಳಿಂದ ಗ್ರಾಹಕರ ದಾರಿ ತಪ್ಪಿಸುತ್ತಿದೆ. ಈ ಬಗ್ಗೆ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸಿ.ಸಿ.ಪಿ.ಎ.ಗೆ ಸೂಚಿಸಿದ್ದೆ. ಅದರಂತೆ, ಸಂಸ್ಥೆಯು ಪರಿಶೀಲನೆ ನಡೆಸಿ ₹10 ಲಕ್ಷ ದಂಡ ವಿಧಿಸಿದೆ,” ಎಂದು ತಿಳಿಸಿದ್ದಾರೆ.






















