ಬೆಂಗಳೂರು, ಆ.22 www.bengaluruwire.com : ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) 1500 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.
ಸ್ವರ್ಣಗೌರಿ ವ್ರತ ಆಗಸ್ಟ್ 26 ರಂದು, ಮತ್ತು ಗಣೇಶ ಚತುರ್ಥಿ ಆಗಸ್ಟ್ 27 ರಂದು ಇರುವುದರಿಂದ, ಹೆಚ್ಚುವರಿ ಬಸ್ಸುಗಳು ಈ ಎರಡೂ ದಿನ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಹೊರಡಲಿವೆ.
ನಂತರ, ಆಗಸ್ಟ್ 27 ಮತ್ತು 31 ರಂದು, ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ಸುಗಳು ಕಾರ್ಯನಿರ್ವಹಿಸಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ತಿರುಪತಿ, ಹೈದರಾಬಾದ್ ಸೇರಿದಂತೆ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ ಮುಂತಾದ ಸ್ಥಳಗಳಿಗೆ ಬಸ್ಸುಗಳು ಹೊರಡಲಿವೆ. ತಮಿಳುನಾಡು ಮತ್ತು ಕೇರಳದಂತಹ ಸ್ಥಳಗಳಾದ ಮಧುರೈ, ಚೆನ್ನೈ, ಕೊಯಮತ್ತೂರು, ತ್ರಿಶೂರ್, ಎರ್ನಾಕುಲಂ ಮುಂತಾದ ಕಡೆಗಳಿಗೆ ತೆರಳುವ ಬಸ್ಸುಗಳು ಶಾಂತಿನಗರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಹೊರಡಲಿವೆ.

ಪ್ರಯಾಣಿಕರ ಅನುಕೂಲಕ್ಕಾಗಿ, ಹೆಚ್ಚುವರಿ ಬಸ್ಸುಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ಇ-ಟಿಕೆಟ್ ಬುಕಿಂಗ್ ಅನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್ www.ksrtc.karnataka.gov.in ಮೂಲಕ ಮಾಡಬಹುದಾಗಿದೆ. ಜೊತೆಗೆ, ಕರ್ನಾಟಕ ಮತ್ತು ಅಂತರರಾಜ್ಯದ ಬುಕಿಂಗ್ ಕೌಂಟರ್‌ಗಳ ಮೂಲಕವೂ ಮುಂಗಡ ಕಾಯ್ದಿರಿಸುವಿಕೆ ಮಾಡಬಹುದು.
ಹಬ್ಬದ ಪ್ರಯಾಣಕ್ಕೆ ರಿಯಾಯಿತಿ ಸೌಲಭ್ಯಗಳನ್ನೂ ಸಹ ಪ್ರಕಟಿಸಲಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ದೊರೆಯಲಿದೆ. ಅಲ್ಲದೆ, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ, ಬರುವ ಪ್ರಯಾಣದ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು.






















