ಬೆಂಗಳೂರು, ಆ. 22 www.bengaluruwire.com : ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ, ಸರ್ಕಾರವು 7 ಹೆಚ್ಚುವರಿ ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ.
ಈ ಮೂಲಕ, ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳಿಗೆ ಶೀಘ್ರ ಇತ್ಯರ್ಥ ದೊರೆಯುವ ನಿರೀಕ್ಷೆ ಇದೆ.
ಕಳೆದ ಎರಡು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನಗಳು ನಡೆದಿವೆಯಾದರೂ, ಹೊಸ ಪ್ರಕರಣಗಳ ಸೇರ್ಪಡೆಯಿಂದ ವಿಳಂಬ ಮುಂದುವರಿದಿದೆ.
ಪ್ರಸ್ತುತ 5,276 ಪ್ರಕರಣಗಳು ಬಾಕಿ ಉಳಿದಿದ್ದು, ಮಾಸಿಕ 143 ಪ್ರಕರಣಗಳ ಇತ್ಯರ್ಥದಿಂದ ಎಲ್ಲ ಪ್ರಕರಣಗಳ ವಿಲೇವಾರಿಗೆ ಹಲವು ವರ್ಷಗಳು ಬೇಕಾಗಲಿದೆ. ಈ ವಿಳಂಬದಿಂದ ಸಾಮಾನ್ಯ ಜನರಿಗೆ ಅನಗತ್ಯ ತೊಂದರೆ ಮತ್ತು ಕಿರುಕುಳ ಉಂಟಾಗುತ್ತಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ‘ನ್ಯಾಯ ವಿಳಂಬವಾದರೆ ಅದು ಕೆಲವೊಮ್ಮೆ ನ್ಯಾಯ ನಿರಾಕರಣೆ ಆಗಬಹುದು’ ಎಂಬ ತತ್ವವನ್ನು ಅನುಸರಿಸಿ, ಸರ್ಕಾರವು ಈ ನಿರ್ಧಾರ ಕೈಗೊಂಡಿದೆ ಎಂದು ಕಂದಾಯ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೊಸ ನೇಮಕಾತಿಯ ಮೂಲಕ, 7 ಐಎಎಸ್ ಅಧಿಕಾರಿಗಳಾದ ರಮೇಶ್ ಕೆ.ಎನ್, ಎಚ್.ಎನ್. ಗೋಪಾಲಕೃಷ್ಣ, ಮುಲ್ಲೈಮುಗಿಲನ್ ಎಂ.ಪಿ., ಡಾ. ಅರುಂಧತಿ ಚಂದ್ರಶೇಖರ್, ಸೆಲ್ವಮಣಿ, ಹೊನ್ನಾಂಬ ಮತ್ತು ವಿದ್ಯಾಕುಮಾರಿ ಅವರನ್ನು ಬೆಂಗಳೂರು ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಈಗಾಗಲೇ ಸೇವೆ ಸಲ್ಲಿಸುತ್ತಿರುವ ಎಸ್.ಎನ್. ಬಾಲಚಂದ್ರ ಮತ್ತು ಅರ್ಚನಾ ಅವರನ್ನೂ ಒಳಗೊಂಡಂತೆ, ಒಟ್ಟು ವಿಶೇಷ ಜಿಲ್ಲಾಧಿಕಾರಿಗಳ ಸಂಖ್ಯೆ 9ಕ್ಕೆ ಏರಿದೆ. ಅಲ್ಲದೆ, ಜಿಲ್ಲಾಧಿಕಾರಿಯೂ ಸಹ ಪ್ರಕರಣಗಳ ವಿಲೇವಾರಿಗೆ ಗಮನ ನೀಡಲಿದ್ದಾರೆ.
ಪ್ರತಿ ವಿಶೇಷ ಜಿಲ್ಲಾಧಿಕಾರಿಗೆ 500 ರಿಂದ 700 ಪ್ರಕರಣಗಳನ್ನು ನಿಗದಿಪಡಿಸಲಾಗಿದ್ದು, ಮುಂದಿನ 6 ತಿಂಗಳೊಳಗೆ ಈ ದೀರ್ಘಕಾಲದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಕ್ರಮದಿಂದ ಸಾರ್ವಜನಿಕರಿಗೆ ತ್ವರಿತ ಮತ್ತು ಸುಲಭ ನ್ಯಾಯ ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.






















