ಬೆಂಗಳೂರು, ಆ.21 www.bengaluruwire.com : ತುಂಗಭದ್ರಾ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಈ ವರ್ಷ ಎರಡನೇ ಬೆಳೆಗೆ ನೀರು ನೀಡುವುದು ಸಾಧ್ಯವಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಅಣೆಕಟ್ಟಿನ ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿ ಟೆಂಡರ್ ಕರೆದಿದ್ದು, ಆರು ಗೇಟ್‌ಗಳ ತಯಾರಿಕೆ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಗೇಟ್‌ಗಳ ದುರಸ್ತಿಗಾಗಿ ಕರ್ನಾಟಕವು ಶೇ.66ರಷ್ಟು ಮತ್ತು ಆಂಧ್ರ-ತೆಲಂಗಾಣ ರಾಜ್ಯಗಳು ಶೇ.33ರಷ್ಟು ಹಣ ನೀಡಬೇಕು. ಆದರೆ, ಆಂಧ್ರ ಸರ್ಕಾರವು ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ತನ್ನ ಪಾಲಿನ ಜೊತೆಗೆ ಆಂಧ್ರದ ಪಾಲಿನ ಹಣವನ್ನೂ ನೀಡಲು ಸಿದ್ಧವಿದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದ್ದಾರೆ. ದುರಸ್ತಿ ಕಾರ್ಯಕ್ಕೆ ಮಂಡಳಿ ಹಣ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರೂ, ರೈತರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಹೂಳು ತುಂಬಿರುವ ಕಾರಣ ಅಣೆಕಟ್ಟಿನ ಸಂಗ್ರಹ ಸಾಮರ್ಥ್ಯ 105 ಟಿಎಂಸಿಗೆ ಕುಸಿದಿದ್ದು, ಇದಕ್ಕೆ ಪರ್ಯಾಯವಾಗಿ ನವಿಲೆ ಬಳಿ 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆಯನ್ನು ಕರ್ನಾಟಕ ಮಂಡಳಿಗೆ ಸಲ್ಲಿಸಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ ಎಂದು ಡಿಸಿಎಂ ತಿಳಿಸಿದರು.

ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಈ ವರ್ಷ ಕೇವಲ 80 ಟಿಎಂಸಿ ನೀರನ್ನು ಸಂಗ್ರಹಿಸಲು ಮಂಡಳಿ ನಿರ್ಧರಿಸಿದ್ದು, ಇದು ರೈತರ ಎರಡನೇ ಬೆಳೆಗೆ ತೊಂದರೆಯುಂಟು ಮಾಡಿದೆ. ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ ನೀರು ಹರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಕಬಿನಿ ಸೇರಿದಂತೆ ರಾಜ್ಯದ ಎಲ್ಲ ಅಣೆಕಟ್ಟುಗಳ ಸುರಕ್ಷತಾ ಸಮೀಕ್ಷೆ ನಡೆಸಲಾಗಿದೆ ಎಂದೂ ಅವರು ಹೇಳಿದರು.






















