ಬೆಂಗಳೂರು, ಆ.21 www.bengaluruwire.com : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ದೇಶದ ವಾಯುಪಡೆ ವಿಮಾನಗಳ ಪ್ರದರ್ಶನ (Airshow) ಏರ್ಪಡಿಸಲು ಸಿಎಂ ಸಿದ್ದರಾಮಯ್ಯ ಮಾಡಿದ ಅವಿರತ ಪ್ರಯತ್ನಕ್ಕೆ ಕೊನೆಗೂ ಫಲ ದೊರೆತಿದೆ.
ಈ ಬಾರಿಯ ದಸರಾದಲ್ಲಿ ರಕ್ಷಣಾ ಇಲಾಖೆಯಿಂದ ವಾಯು ಪ್ರದರ್ಶನ ನಡೆಸಲು ಅನುಮತಿ ದೊರೆತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿ ಪತ್ರ ಬರೆದಿದ್ದಾರೆ. ಏರ್ ಶೋ ಪ್ರದರ್ಶನವು ಮೈಸೂರು ದಸರಾದ ಆಕರ್ಷಣೆಯನ್ನು ಹೆಚ್ಚಿಸಲಿದ್ದು, ಲಕ್ಷಾಂತರ ಪ್ರವಾಸಿಗರಲ್ಲಿ ಹೆಮ್ಮೆ ಮತ್ತು ದೇಶಭಕ್ತಿಯನ್ನು ತುಂಬಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೈಸೂರು ದಸರಾಕ್ಕೆ ವೈಭವದ ಸ್ಪರ್ಶ :
ಮೈಸೂರು ದಸರಾ-2025ರ ಭಾಗವಾಗಿ ಭಾರತೀಯ ವಾಯುಪಡೆಯ ವತಿಯಿಂದ ಏರ್ ಶೋ ಆಯೋಜಿಸಲು ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ಈ ಕುರಿತು ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಮೈಸೂರು ದಸರಾದ ಐತಿಹಾಸಿಕ ವೈಭವವನ್ನು ಮತ್ತಷ್ಟು ಹೆಚ್ಚಿಸಲಿದೆ. ಜೊತೆಗೆ, ಏರ್ ಶೋ ವೀಕ್ಷಿಸಲು ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಜನರಲ್ಲಿ ಇದು ಹೆಮ್ಮೆ ಮತ್ತು ದೇಶಭಕ್ತಿಯನ್ನು ಹೆಚ್ಚಿಸಲಿದೆ ಎಂದು ಬಣ್ಣಿಸಿದ್ದಾರೆ.

ವೈಯಕ್ತಿಕವಾಗಿ ಪಾಲ್ಗೊಳ್ಳಲು ರಕ್ಷಣಾ ಸಚಿವರಿಗೆ ಆಹ್ವಾನ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಮೈಸೂರು ದಸರಾ ಮಹೋತ್ಸವಕ್ಕೆ ವೈಯಕ್ತಿಕವಾಗಿ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ. ಈ ಕುರಿತು ಬರೆದಿರುವ ಪತ್ರದಲ್ಲಿ, ಅವರ ಉಪಸ್ಥಿತಿಯು ಕರ್ನಾಟಕದ ನಾಗರಿಕರಿಗೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಇರುವ ಗೌರವ ಮತ್ತು ಮೆಚ್ಚುಗೆಯನ್ನು ಬಲಪಡಿಸಲು ದೊಡ್ಡ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.
ರಕ್ಷಣಾ ಇಲಾಖೆಯ ಈ ಉದಾರ ನಡೆಯಿಂದ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ತೆರೆದಂತಾಗಿದೆ. ದಸರಾ ವೀಕ್ಷಿಸಲು ಆಗಮಿಸುವ ಜನರಿಗೆ ಇದೊಂದು ವಿಶೇಷ ಅನುಭವವಾಗಲಿದೆ ಎಂದು ನಿರೀಕ್ಷಿಸಲಾಗಿದೆ.






















