ತಿರುಪತಿ, ಆ.20 www.bengaluruwire.com : ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತರೊಬ್ಬರು ಸುಮಾರು ₹140 ಕೋಟಿ ಮೌಲ್ಯದ 121 ಕೆ.ಜಿ. ಚಿನ್ನವನ್ನು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಲು ಮುಂದೆ ಬಂದಿದ್ದಾರೆ.
ತಮ್ಮ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಲು ಇಚ್ಛಿಸದ ಈ ಭಕ್ತ, ತಮ್ಮ ಯಶಸ್ಸಿಗೆ ದೇವರು ಕಾರಣ ಎಂದು ಕೃತಜ್ಞತೆ ಸಲ್ಲಿಸಲು ಈ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಂಗಳವಾರ ತಿಳಿಸಿದ್ದಾರೆ.
ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದ ಉದ್ಯಮಿ :
ಈ ಅನಾಮಧೇಯ ಭಕ್ತ ಆರಂಭದಲ್ಲಿ ತಮ್ಮ ವ್ಯವಹಾರದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದರು. ಆದರೆ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು ಗಳಿಸಿ, ಇಂದು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ತಮ್ಮ ಯಶಸ್ಸಿಗೆ ಕಾರಣನಾದ ದೇವರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ, ಅವರು ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನವನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ಈ ಮೂಲಕ ವೆಂಕಟೇಶ್ವರ ಸ್ವಾಮಿಯ ಮೇಲಿನ ತಮ್ಮ ಅಪಾರ ಭಕ್ತಿಯನ್ನು ಪ್ರದರ್ಶಿಸಿದ್ದಾರೆ.

ನಿತ್ಯದ ಅಲಂಕಾರಕ್ಕಿಂತ 1 ಕೆ.ಜಿ. ಹೆಚ್ಚು ಚಿನ್ನ ಕಾಣಿಕೆ :
ತಿರುಮಲ ದೇವಸ್ಥಾನದಲ್ಲಿ ನಿತ್ಯವೂ ವೆಂಕಟೇಶ್ವರ ಸ್ವಾಮಿಯನ್ನು 120 ಕೆ.ಜಿ. ಚಿನ್ನಾಭರಣಗಳಿಂದ ಅಲಂಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರು ಅದಕ್ಕಿಂತ ಒಂದು ಕೆ.ಜಿ. ಹೆಚ್ಚು, ಅಂದರೆ 121 ಕೆ.ಜಿ. ಚಿನ್ನವನ್ನು ಅರ್ಪಿಸುತ್ತಿದ್ದಾರೆ. ಇದು ದೇವಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ವೈಯಕ್ತಿಕ ಕಾಣಿಕೆಗಳಲ್ಲಿ ಒಂದಾಗಲಿದೆ. ಈ ಕಾಣಿಕೆಯು ದೇವಸ್ಥಾನದ ಆಭರಣ ಭಂಡಾರಕ್ಕೆ ಮತ್ತಷ್ಟು ಮೆರುಗು ನೀಡಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಈ ಮಹತ್ತರ ಕಾಣಿಕೆ ದೇವಾಲಯದ ಆಡಳಿತಕ್ಕೆ ಇನ್ನಷ್ಟು ಶಕ್ತಿ ತುಂಬಲಿದೆ.






















