ಬೆಂಗಳೂರು, ಆ.17 www.bengaluruwire.com : ಭಾರತೀಯ ಹವಾಮಾನ ಇಲಾಖೆ (India Meteorological Department – IMD)ಯು ರಾಜ್ಯದಾದ್ಯಂತ ಆಗಸ್ಟ್ 18ರಿಂದ 20ರವರೆಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಇದೇ ಕಾರಣಕ್ಕೆ ಕೆಲವು ಜಿಲ್ಲೆಗಳಿಗೆ ರೆಡ್, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್‌ಗಳನ್ನು ಘೋಷಿಸಲಾಗಿದೆ.
ಕರಾವಳಿ ಕರ್ನಾಟಕದಲ್ಲಿ ಬಿರುಗಾಳಿ, ಭಾರಿ ಮಳೆ ಸಾಧ್ಯತೆ :
ಆಗಸ್ಟ್ 18 ಮತ್ತು 19ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಬಿರುಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 18ರಂದು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮತ್ತು ಬಿರುಗಾಳಿಗೆ ಮುನ್ನೆಚ್ಚರಿಕೆಯಾಗಿ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಇದರೊಂದಿಗೆ, ಆಗಸ್ಟ್ 19ರಂದು ಇದೇ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಇರಲಿದೆ.
ಉತ್ತರ ಒಳನಾಡಿನಲ್ಲಿ ಭಾರಿ ಗಾಳಿ ಮಳೆ :

ಉತ್ತರ ಒಳನಾಡಿನಲ್ಲಿ ಆಗಸ್ಟ್ 18ರಂದು ಬೀದರ್ ಜಿಲ್ಲೆಯಲ್ಲಿ ಮತ್ತು ಆಗಸ್ಟ್ 19ರಂದು ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಆಗಸ್ಟ್ 17 ಮತ್ತು 18ರಂದು ಉತ್ತರ ಒಳನಾಡಿನಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದೆ. ಆಗಸ್ಟ್ 19 ಮತ್ತು 20ರಂದು ಇದು ಗಂಟೆಗೆ 40-50 ಕಿ.ಮೀ ವೇಗಕ್ಕೆ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಉಳಿದ ಜಿಲ್ಲೆಗಳಾದ ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಆಗಸ್ಟ್ 18 ಮತ್ತು 19ರಂದು ‘ಯೆಲ್ಲೋ ಅಲರ್ಟ್’ ಇರಲಿದೆ ಎಂದು ತಿಳಿಸಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆಯ ಎಚ್ಚರಿಕೆ :
ದಕ್ಷಿಣ ಒಳನಾಡಿನಲ್ಲಿ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಆಗಸ್ಟ್ 18ರಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮಂಡ್ಯ, ರಾಮನಗರ, ತುಮಕೂರು, ಮತ್ತು ವಿಜಯನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್ 17 ಮತ್ತು 19ರಂದು ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.























