ಆನೇಕಲ್, ಆ.16 www.bengaluruwire.com : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ಬಸ್‌ನ ಕಿಟಕಿ ಬಳಿ ಕುಳಿತಿದ್ದ 13 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ. ಚಿರತೆಯ ದಾಳಿಗೆ ಬಾಲಕನ ಕೈಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಜೆ ಇದ್ದ ಕಾರಣ ಕುಟುಂಬದೊಂದಿಗೆ ಬನ್ನೇರುಘಟ್ಟ ಸಫಾರಿಗೆ ಬಾಲಕ ಬಂದಿದ್ದ. ಪ್ರಾಣಿಗಳನ್ನು ನೋಡಲೆಂದು ಸಫಾರಿ ಬಸ್ ನಿಧಾನವಾಗಿ ಚಲಿಸುತ್ತಿರುವಾಗ ಹಿಂಬದಿಯಿಂದ ಬಂದು ಚಿರತೆಯೊಂದು ಬಸ್‌ನ ಕಿಟಕಿ ಮೇಲೆ ಹಾರಿದೆ. ಈ ವೇಳೆ ಕಿಟಕಿ ಪಕ್ಕದಲ್ಲಿ ಕೈ ಇಟ್ಟುಕೊಂಡಿದ್ದ ಬಾಲಕನ ಕೈಗೆ ಉಗುರುಗಳಿಂದ ಪರಚಿ ಗಾಯಗೊಳಿಸಿದೆ. ಘಟನೆಯ ದೃಶ್ಯವು ಮತ್ತೊಂದು ಬಸ್‌ನಲ್ಲಿದ್ದ ಪ್ರವಾಸಿಗರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ.
ಈ ಕುರಿತು ಮಾಹಿತಿ ನೀಡಿರುವ ಬನ್ನೇರುಘಟ್ಟ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್, “ಗಾಯಗೊಂಡ ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಬಾಲಕನು ಕಿಟಕಿಯ ಬಳಿ ಕೈ ಇಟ್ಟುಕೊಂಡಿದ್ದರಿಂದ ಈ ಘಟನೆ ಸಂಭವಿಸಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗುವುದು” ಎಂದು ಹೇಳಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಈಶ್ವರ್ ಖಂಡ್ರೆ, ಸಫಾರಿ ವಾಹನಗಳ ಕಿಟಕಿ ಮತ್ತು ಫೋಟೊ ತೆಗೆಯಲು ಇರುವ ರಂಧ್ರಗಳಿಗೆ ಜಾಲರಿ ಅಳವಡಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ, ಪ್ರವಾಸಿಗರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲು ಮತ್ತು ಸಫಾರಿ ಟಿಕೆಟ್‌ನಲ್ಲಿಯೇ ಎಚ್ಚರಿಕೆಯ ಸಂದೇಶ ಮುದ್ರಿಸಲು ತಿಳಿಸಿದ್ದಾರೆ.























