ಬೆಂಗಳೂರು, ಆ.15 www.bengaluruwire.com : ದೇಶದ ಸಂಪತ್ತಿನ ಅಸಮಾನ ಹಂಚಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶೇ 10ರಷ್ಟು ಶ್ರೀಮಂತರ ಬಳಿ ಶೇ 80ರಷ್ಟು ಸಂಪತ್ತು ಸಂಗ್ರಹವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷಾದಿಸಿದರು. ಈ ಅಸಮಾನತೆಯನ್ನು ಹೋಗಲಾಡಿಸಲು ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು.
79ನೇ ಸ್ವಾತಂತ್ರ್ಯೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದಕ್ಕೆ ಸಿಎಂ ಮೆಚ್ಚುಗೆ ಸೂಚಿಸಿದರು. ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರು ಉಚಿತವಾಗಿ 500 ಕೋಟಿ ಟ್ರಿಪ್ಪುಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು. ಇದು ಮಹಿಳೆಯರ ಕಾರ್ಮಿಕ ಶಕ್ತಿ ಭಾಗವಹಿಸುವಿಕೆಯನ್ನು ಶೇ 23ರಷ್ಟು ಹೆಚ್ಚಿಸಿದೆ ಎಂದು ಅಧ್ಯಯನಗಳು ಹೇಳುತ್ತಿವೆ.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ₹1,35,000 ಕೋಟಿಗೂ ಅಧಿಕ ವೆಚ್ಚದಲ್ಲಿ ಡಬಲ್ ಡೆಕ್ಕರ್ ರಸ್ತೆಗಳು, ಸುರಂಗ ರಸ್ತೆಗಳು, ಮೆಟ್ರೋ ಮಾರ್ಗಗಳು ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು. ಬೆಂಗಳೂರು ಮತ್ತು ಇತರೆ ಪ್ರದೇಶಗಳಲ್ಲಿನ ಬಿ-ಖಾತಾ ಗೊಂದಲಗಳನ್ನು ಬಗೆಹರಿಸಿ ಎ-ಖಾತಾ ನೀಡುವ ಕ್ರಾಂತಿಕಾರಿ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.

ಕರ್ನಾಟಕವು ತಲಾದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಿಎಂ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ತಲಾದಾಯದಲ್ಲಿ ಶೇ 101ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜ್ಯವು ಐಟಿ ರಾಜಧಾನಿಯಾಗಿರುವುದಲ್ಲದೆ, ಜಗತ್ತಿನ ‘ನಾವೀನ್ಯತಾ ರಾಜಧಾನಿ’ಯಾಗುವತ್ತ ಹೆಜ್ಜೆ ಇಟ್ಟಿದೆ. ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಕರ್ನಾಟಕದಲ್ಲಿದೆ ಎಂದರು.
ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರತಿ ವರ್ಷ ₹5,000 ಕೋಟಿ ಮೀಸಲಿಡಲಾಗಿದೆ. ‘ನಕ್ಸಲ್ ಮುಕ್ತ ರಾಜ್ಯ’ವಾಗಿ ಕರ್ನಾಟಕವನ್ನು ಘೋಷಿಸಿದ್ದು, ಇದೀಗ ‘ಡ್ರಗ್ಸ್ ಮುಕ್ತ ರಾಜ್ಯ’ವನ್ನಾಗಿ ಮಾಡಲು ಹೋರಾಡಬೇಕಿದೆ ಎಂದು ಸಿಎಂ ಹೇಳಿದರು.
ರಾಜ್ಯದ ಆರ್ಥಿಕತೆಗೆ ಸೇವಾ ವಲಯದ ಕೊಡುಗೆ ಶೇ 66.7ರಷ್ಟಿದೆ. ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ₹4 ಲಕ್ಷ ವಿಮಾ ಯೋಜನೆಯನ್ನು ಜಾರಿಗೆ ತರುತ್ತಿರುವುದಾಗಿ ಅವರು ತಿಳಿಸಿದರು.
ಈ ಅದ್ಧೂರಿ ಕಾರ್ಯಕ್ರಮದಲ್ಲಿ 8 ಸಾವಿರ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಮೆರಗು ಪಡೆದುಕೊಂಡವು. ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್ ಎಫ್, ಗೋವಾ ಪೊಲೀಸ್ ತಂಡ ಸೇರಿ ವಿವಿಧ ಇಲಾಖೆಯ 35 ತುಕಡಿಗಳಲ್ಲಿ 1,150 ಮಂದಿಯಿಂದ ಪಥ ಸಂಚಲನ ಹಾಗೂ ಸರ್ಕಾರಿ ಮತ್ತು ಬಿಬಿಎಂಪಿಯ 1,150 ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಪೊಲೀಸ್ ಸಮೂಹ ವಾದ್ಯಮೇಳದ 253 ಅಧಿಕಾರಿ, ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಮಾರಂಭದಲ್ಲಿ ರಾಜ್ಯ ಸಂಪುಟ ಸಚಿವರು, ರಾಜ್ಯದ ಶಾಸಕರು, ಅಧಿಕಾರಿಗಳು ಹಾಗೂ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ಪ್ರಮುಖಾಂಶಗಳು ಹೀಗಿದೆ :
ರಾಜ್ಯದ ಆರ್ಥಿಕ ಪ್ರಗತಿ ಮತ್ತು ಕಲ್ಯಾಣ ಯೋಜನೆಗಳು
* ತಲಾದಾಯ: ಕರ್ನಾಟಕದ ತಲಾದಾಯವು ಕಳೆದ ಹತ್ತು ವರ್ಷಗಳಲ್ಲಿ 101% ಹೆಚ್ಚಳ ಕಂಡಿದೆ. 2013-14ರಲ್ಲಿ ₹1,01,858 ಇದ್ದ ತಲಾದಾಯವು 2024-25ರ ವೇಳೆಗೆ ₹2,04,605ಕ್ಕೆ ತಲುಪಿದೆ.
* ಗ್ಯಾರಂಟಿ ಯೋಜನೆಗಳು: ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಮತ್ತು ಯುವನಿಧಿ ಯೋಜನೆಗಳಿಗಾಗಿ ಇದುವರೆಗೆ ₹96,000 ಕೋಟಿಗೂ ಅಧಿಕ ಹಣ ವಿನಿಯೋಗಿಸಲಾಗಿದೆ.
* ಮಹಿಳಾ ಪಾಲ್ಗೊಳ್ಳುವಿಕೆ: ಶಕ್ತಿ ಯೋಜನೆಯಿಂದಾಗಿ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ 23% ರಷ್ಟು ಹೆಚ್ಚಾಗಿದೆ. ಮಹಿಳೆಯರು 500 ಕೋಟಿಗೂ ಹೆಚ್ಚು ಟ್ರಿಪ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ವಲಯ
* ಕೃಷಿ ಅನುದಾನ: 2025-26ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ₹51,339 ಕೋಟಿ ಒದಗಿಸಲಾಗಿದೆ. ಇದು 2022-23ಕ್ಕೆ ಹೋಲಿಸಿದರೆ 52.34% ಹೆಚ್ಚಳವಾಗಿದೆ.
* ಎಪಿಎಂಸಿ ಸುಧಾರಣೆ: 2024-25ರಲ್ಲಿ 164 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕೃಷಿ ಉತ್ಪನ್ನಗಳು ಎಪಿಎಂಸಿಗಳಿಗೆ ಆವಕವಾಗಿದ್ದು, ಇದು 447% ಹೆಚ್ಚಳವಾಗಿದೆ.
* ಹೈನುಗಾರಿಕೆ: ಹೈನುಗಾರರಿಗೆ ₹3,283 ಕೋಟಿ ಪ್ರೋತ್ಸಾಹಧನ ಪಾವತಿಸಲಾಗಿದೆ. ಹಿಂದಿನ ಸರ್ಕಾರದಿಂದ ಬಾಕಿ ಇದ್ದ ₹609 ಕೋಟಿ ಸಹ ಸೇರಿದೆ.
* ಕೈಗಾರಿಕೆಗಳು: ₹10 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಲು ಉದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. ರಾಜ್ಯವು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದ ಜಿಎಸ್‌ಡಿಪಿಗೆ ಕೈಗಾರಿಕಾ ವಲಯದ ಕೊಡುಗೆ 23.6% ಆಗಿದೆ.
ಮೂಲಸೌಕರ್ಯ ಮತ್ತು ಇತರ ಯೋಜನೆಗಳು
* ಬಂಡವಾಳ ವೆಚ್ಚ: ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ವರ್ಷ ₹83,200 ಕೋಟಿ ವಿನಿಯೋಗಿಸಲಾಗುತ್ತಿದೆ. ಬಜೆಟ್‌ನ 20.1% ರಷ್ಟು ಹಣವನ್ನು ಈ ಉದ್ದೇಶಕ್ಕಾಗಿ ಮೀಸಲಿಟ್ಟ ಪ್ರಮುಖ ರಾಜ್ಯ ಕರ್ನಾಟಕವಾಗಿದೆ.
* ವಸತಿ: ವಿವಿಧ ಯೋಜನೆಗಳಡಿ 3,87,756 ಮನೆಗಳನ್ನು ಪೂರ್ಣಗೊಳಿಸಲಾಗಿದೆ.
* ಕಲ್ಯಾಣ ಕರ್ನಾಟಕ: ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕಲ್ಯಾಣ ಕರ್ನಾಟಕಕ್ಕೆ ವಾರ್ಷಿಕ ₹5,000 ಕೋಟಿ ಒದಗಿಸಲಾಗಿದೆ. 1,150 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲು ₹1,000 ಕೋಟಿ ಮೀಸಲಿಡಲಾಗಿದೆ.
* ರಸ್ತೆ ಅಭಿವೃದ್ಧಿ: ಕಳೆದ ಎರಡು ವರ್ಷಗಳಲ್ಲಿ 12,000 ಕಿ.ಮೀ.ಗಿಂತ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ವರ್ಷ ರಸ್ತೆ ಮತ್ತು ಸೇತುವೆಗಳಿಗಾಗಿ ₹8,000 ಕೋಟಿ ವಿನಿಯೋಗಿಸಲಾಗುತ್ತಿದೆ.
* ಶಿಕ್ಷಣ ಮತ್ತು ಆರೋಗ್ಯ: ಶಿಕ್ಷಣ ಕ್ಷೇತ್ರಕ್ಕೆ ₹65,000 ಕೋಟಿ, ಆರೋಗ್ಯ ವಲಯದಲ್ಲಿ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ತಾಯಂದಿರ ಮರಣ ಪ್ರಮಾಣ 26% ಕಡಿಮೆಯಾಗಿದೆ.






















