ನವದೆಹಲಿ, ಆ.14 www.bengaluruwire.com : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ.
ಈ ಮೂಲಕ ಪ್ರಕರಣದ ಪ್ರಮುಖ ಆರೋಪಿಗಳಿಗೆ ದೊಡ್ಡ ಹಿನ್ನಡೆಯಾಗಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ, ನ್ಯಾಯಾಲಯ ಈ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ದ್ವಿಸದಸ್ಯ ಪೀಠವು ಇಂದು ಬೆಳಿಗ್ಗೆ ಈ ಆದೇಶವನ್ನು ನೀಡಿತು ಹಾಗೂ ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.
ಜಾಮೀನು ರದ್ದುಗೊಂಡಿರುವ ಹಿನ್ನೆಲೆಯಲ್ಲಿ, ಸದ್ಯ ‘ಡೆವಿಲ್’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿರುವ ನಟ ದರ್ಶನ್‌ರನ್ನು ಮತ್ತೆ ಬಂಧಿಸುವ ಸಾಧ್ಯತೆ ಇದೆ.

ಹೈಕೋರ್ಟ್ ನೀಡಿದ ಜಾಮೀನು ಆದೇಶದ ಕುರಿತು ಜುಲೈ 24ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. “ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸುವ ಉದ್ದೇಶದಿಂದ ಈ ಆದೇಶ ನೀಡಿದಂತಿದೆ” ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಟೀಕಿಸಿತ್ತು.
ಇದೀಗ ಜಾಮೀನು ಸಂಪೂರ್ಣವಾಗಿ ರದ್ದಾಗಿರುವ ಕಾರಣ, ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ ಎಲ್ಲ ಆರೋಪಿಗಳನ್ನು ಮತ್ತೆ ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖಾಂಶಗಳು :
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೈಕೋರ್ಟ್‌ನ ಜಾಮೀನು ಆದೇಶವನ್ನು ಗಂಭೀರವಾಗಿ ಪ್ರಶ್ನಿಸಿದೆ. “ಹೈಕೋರ್ಟ್‌ನ ಜಾಮೀನು ಆದೇಶದಲ್ಲಿ ಗಂಭೀರ ಕಾನೂನು ದೋಷಗಳಿವೆ” ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಗಂಭೀರತೆ, ಆರೋಪಿಗಳ ಪಾತ್ರ ಮತ್ತು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆಗಳು ತ್ವರಿತವಾಗಿ ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಈ ತೀರ್ಪು, ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರಕ್ಕೆ ಅವಕಾಶ ನೀಡಿದಂತಾಗಿದೆ.






















