ಬೆಂಗಳೂರು, ಆ.13 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಆಗಸ್ಟ್ 15 ರಂದು ನಡೆಯಲಿರುವ 79 ನೇ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್.ಜಿ, ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯು ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೈದಾನವನ್ನು ಸಿದ್ಧಪಡಿಸಲಾಗಿದೆ. ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಡಿಂಗ್ ಹಾಗೂ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಅಲಂಕಾರಿಕ ಬ್ರಾಸ್ ಪರಿಕರಗಳನ್ನು ಸಹ ಅಳವಡಿಸಲಾಗುತ್ತಿದೆ. ಧ್ವಜಾರೋಹಣಕ್ಕಾಗಿ ಧ್ವಜಸ್ತಂಭ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆ.15ರ ಬೆಳಗ್ಗೆ 8:58ಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಧ್ವಜಾರೋಹಣದ ನಂತರ, ಮುಖ್ಯಮಂತ್ರಿಗಳು ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮಾಡಲಿದ್ದಾರೆ ಹಾಗೂ ಗೌರವ ರಕ್ಷೆ ಸ್ವೀಕರಿಸಿದ ನಂತರ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ನೀಡಲಿದ್ದಾರೆ. ಈಗಾಗಲೇ ಗೌರವ ರಕ್ಷೆ ಸ್ವೀಕರಿಸುವ ತಾಲೀಮು ಆಗಸ್ಟ್ 11, 12, ಮತ್ತು 13 ರಂದು ನಡೆದಿದೆ.

ಸ್ವಾತಂತ್ರ್ಯೋತ್ಸವದ ದಿನ ಈ ಗೌರವ ರಕ್ಷೆಯಲ್ಲಿ ಕೆ.ಎಸ್.ಆರ್.ಪಿ, ಸಿ.ಆರ್.ಪಿ.ಎಫ್, ಬಿ.ಎಸ್.ಎಫ್, ಸಿ.ಎ.ಆರ್, ಗೋವಾ ಪೋಲೀಸ್, ಕೆ.ಎಸ್.ಐ.ಎಸ್.ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಟ್ರಾಪಿಕ್ ವಾರ್ಡನ್, ಅಗ್ನಿಶಾಮಕ ದಳ ಸಿಬ್ಬಂದಿ, ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್‌ನ ಒಟ್ಟು 35 ತುಕಡಿಗಳಿಂದ ಸುಮಾರು 1,150 ಮಂದಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರಿಗೆ ಈ ಬಾರಿ ಪ್ರಥಮ ಬಾರಿಗೆ ಇ-ಪಾಸ್ ವ್ಯವಸ್ಥೆ :

ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಈ ಬಾರಿ ಪ್ರಥಮ ಬಾರಿಗೆ ಸೇವಾ ಸಿಂಧು ವೆಬ್‌ಸೈಟ್ (www.sevasindhu.karnataka.gov.in) ಮೂಲಕ ಇ-ಪಾಸ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಗೇಟ್-5ರ ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಅವರಿಗೆ 2,000 ಪಾಸ್‌ಗಳನ್ನು ನೀಡಲಾಗಿದೆ. ಮಾಧ್ಯಮದವರಿಗೆ ಗೇಟ್-4 ರ ಮೂಲಕ ಪ್ರವೇಶವಿದ್ದು, 3,000 ಪಾಸ್‌ಗಳನ್ನು ನೀಡಲಾಗಿದೆ. ಅತಿಗಣ್ಯ/ಗಣ್ಯ ವ್ಯಕ್ತಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳು, ಮತ್ತು ಹಿರಿಯ ಅಧಿಕಾರಿಗಳಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಲಾಗಿದ್ದು, ಒಟ್ಟು 3,000 ಪಾಸ್‌ಗಳನ್ನು ನೀಡಲಾಗಿದೆ.
ಕಾರ್ಯಕ್ರಮದ ಭದ್ರತೆಗಾಗಿ ಮೈದಾನದಲ್ಲಿ 100 ಸಿಸಿ ಕ್ಯಾಮೆರಾಗಳನ್ನು ಹಾಗೂ 2 ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವೈದ್ಯಕೀಯ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ತುರ್ತು ಪರಿಸ್ಥಿತಿಗಾಗಿ ನಗರದ ಕೆಲವು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ನಾಡಗೀತೆ ಮತ್ತು ರೈತಗೀತೆಯನ್ನು ರಾಜೇಶ್, ನಿರ್ಮಲ ಡಿ.ಆರ್ ಮತ್ತು ತಂಡ ಪ್ರಸ್ತುತಪಡಿಸಲಿದೆ. “ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತೀಯರು” ಎಂಬ ವಿಷಯದ ಮೇಲೆ ಹೀರೋಹಳ್ಳಿಯ ಪದವಿ ಪೂರ್ವ ಕಾಲೇಜಿನ 250 ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ 500 ವಿದ್ಯಾರ್ಥಿಗಳು “ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳು” ಕುರಿತು ಪ್ರದರ್ಶನ ನೀಡಲಿದ್ದಾರೆ. ಕೊನೆಯಲ್ಲಿ, ಕರ್ನಾಟಕ ಪೊಲೀಸ್ ಇಲಾಖೆಯ 253 ಸಿಬ್ಬಂದಿಗಳಿಂದ ಸಾಮೂಹಿಕ ವಾದ್ಯಗೋಷ್ಠಿ ನಡೆಯಲಿದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನದಲ್ಲಿ ವೀಕ್ಷಿಸಬಹುದು.






















