ಬೆಂಗಳೂರು, ಆ.13 www.bengaluruwire.com : ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಆಫ್ರಿಕಾ ಖಂಡದ ಘಾನಾದ 6 ವರ್ಷದ ಬಾಲಕನಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದೆ.
ಎದೆ ನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕ ಮಾಸ್ಟರ್ ಜಡೆನ್ ನೈಹಿರಾಬಾ ಅಚೆಂಪೊಂಗ್ ಅವರನ್ನು ಜು.23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಾನಾದಲ್ಲಿ ಬಾಲಕನಿಗೆ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗೆ ಸೌಲಭ್ಯ ಇರಲಿಲ್ಲ. ಹೀಗಾಗಿ ಜಯದೇವ ಸಂಸ್ಥೆಗೆ ಕರೆತರಲಾಗಿತ್ತು. ಇಲ್ಲಿನ ವೈದ್ಯರು ಬಾಲಕನಿಗೆ ಬಲ ವೆಂಟ್ರಿಕ್ಯುಲರ್ ಹೊರಹರಿವಿನ ಅಡಚಣೆ (RVOT) ಇರುವುದನ್ನು ಪತ್ತೆ ಹಚ್ಚಿದರು.
ಮಕ್ಕಳ ಹೃದ್ರೋಗ ಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಜಯರಂಗನಾಥ್ ಮತ್ತು ಅವರ ತಂಡ ಪ್ರಕರಣವನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಿದ್ದರು. ಡಾ. ಪಿ.ಕೆ. ಸುನಿಲ್ ನೇತೃತ್ವದ ತಂಡ, ಡಾ. ರಶ್ಮಿ ಮತ್ತು ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕ ಡಾ. ಹರೀಶಾ ಮುಖ್ರಿ ಹಾಗೂ ಹೃದಯ ಅರಿವಳಿಕೆ ತಜ್ಞ ಡಾ.ಪುಷ್ಪಾ ಅವರನ್ನೊಳಗೊಂಡ ವೈದ್ಯಕೀಯ ತಂಡವು ಇತ್ತೀಚೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಶಸ್ತ್ರಚಿಕಿತ್ಸೆಯ ನಂತರ, ಬಾಲಕನು ಆರೋಗ್ಯವಾಗಿ ಚೇತರಿಸಿಕೊಂಡಿದ್ದು, ಆತನ ಹೃದಯ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಆಗಸ್ಟ್ 8ರಂದು ಆ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಬಾಲಕನ ಶಸ್ತ್ರಚಿಕಿತ್ಸೆಗೆ ಘಾನಾದ ರೋಟರಿ ಇಂಟರ್ನ್ಯಾಷನಲ್, ಬೆಂಗಳೂರಿನ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3190 ಮತ್ತು ರೋಟರಿ ನೀಡಿ ಹಾರ್ಟ್ ಫೌಂಡೇಶನ್ ಸಹಯೋಗದಲ್ಲಿ ನೆರವು ನೀಡಿವೆ. ಜಯದೇವ ಆಸ್ಪತ್ರೆಯು ಸಬ್ಸಿಡಿ ದರದಲ್ಲಿ ಚಿಕಿತ್ಸೆ ನೀಡಿದೆ. ಈ ಸಹಕಾರಕ್ಕಾಗಿ ಬಾಲಕನ ತಾಯಿ ರಾಜ್ಯ ಸರ್ಕಾರ, ರೋಟರಿ ನೀಡಿ ಹಾರ್ಟ್ ಫೌಂಡೇಶನ್ ಮತ್ತು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಕೆ.ಎಸ್.ರವೀಂದ್ರನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಡಾ. ಕೆ.ಎಸ್.ರವೀಂದ್ರನಾಥ್ ಅವರ ಪ್ರಕಾರ, ಪ್ರತಿ 1000 ಶಿಶುಗಳಲ್ಲಿ 8-10 ಶಿಶುಗಳು ಟೆಟ್ರಾಲಜಿ ಆಫ್ ಫಾಲಟ್, ಹೃದಯ ರಂಧ್ರಗಳು ಅಥವಾ ಕವಾಟಗಳ ಕಿರಿದಾಗುವಿಕೆಯಂತಹ ಸಂಕೀರ್ಣ ಜನ್ಮಜಾತ ಹೃದ್ರೋಗದಿಂದ ಬಳಲುತ್ತವೆ. ಈ ರೋಗಲಕ್ಷಣಗಳಲ್ಲಿ ಜ್ವರ, ಪುನರಾವರ್ತಿತ ಕೆಮ್ಮು, ನ್ಯುಮೋನಿಯಾ, ಬೆಳವಣಿಗೆ ಕುಂಠಿತ, ಚರ್ಮ ಮತ್ತು ಉಗುರುಗಳು ನೀಲಿ ಬಣ್ಣಕ್ಕೆ ತಿರುಗುವುದು ಹಾಗೂ ತೂಕ ಕಡಿಮೆಯಾಗುವುದು ಸೇರಿವೆ ಎಂದು ಹೇಳಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















