ಬೆಂಗಳೂರು, ಆ.12 www.bengaluruwire.com : ರಾಜಧಾನಿ ಬೆಂಗಳೂರಿನ ಮಹತ್ವಾಕಾಂಕ್ಷೆಯ ಮೆಟ್ರೋ 2ಎ ಹಾಗೂ 2ಬಿ ಯೋಜನೆಯಡಿ ಬರಬೇಕಿದ್ದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣವನ್ನು ಯೋಜನೆಯ ನೀಲಿ ನಕ್ಷೆಯಿಂದ ಕೈಬಿಡಲಾಗಿದೆ.
ಇದಕ್ಕೆ ಮುಖ್ಯ ಕಾರಣ, ಎಂಬೆಸ್ಸಿ ಗ್ರೂಪ್ ಸಂಸ್ಥೆಯು ಒಪ್ಪಂದದ ಪ್ರಕಾರ ಭರಿಸಬೇಕಿದ್ದ ವೆಚ್ಚವನ್ನು ಪಾವತಿಸದಿರುವುದು. ಈ ಸಂಬಂಧ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಇಂದು ಲಿಖಿತ ಉತ್ತರ ನೀಡಿದರು.

ಈ ವೇಳೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕೂಡ ಪ್ರಶ್ನೆ ಕೇಳಿದಾಗ, ಉಪಮುಖ್ಯಮಂತ್ರಿಗಳು ಖಡಕ್ ಉತ್ತರ ನೀಡಿದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಮುನಿರತ್ನ, ಎಂಬೆಸ್ಸಿ ಗ್ರೂಪ್ ಹಣ ನೀಡದ ಕಾರಣ ನಿಲ್ದಾಣವನ್ನು ಕೈಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಮ್ಮ ಮೆಟ್ರೋ ಯೋಜನೆಗೆ ಸಿಎಸ್‌ಆರ್ ಅನುದಾನ ಬಳಸಿಕೊಂಡು ನಿಲ್ದಾಣ ನಿರ್ಮಿಸುವ ಮಾದರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸಹಯೋಗದ ಮೂಲಕ ನಿರ್ಮಿಸುವ ನಿಲ್ದಾಣಗಳಿಗೆ ಆ ಸಂಸ್ಥೆಯ ಹೆಸರನ್ನೇ ಇಡುವ ಅವಕಾಶವಿದೆ.
ಎಂಬೆಸ್ಸಿ ಗ್ರೂಪ್ ಬೆಟ್ಟಹಲಸೂರು ನಿಲ್ದಾಣಕ್ಕೆ 140 ಕೋಟಿ ರೂ. ವೆಚ್ಚದಲ್ಲಿ 120 ಕೋಟಿ ರೂ. ಭರಿಸುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಮುಂಗಡವಾಗಿ ಕೇವಲ 1 ಕೋಟಿ ರೂ. ಮಾತ್ರ ಪಾವತಿಸಿ, ಉಳಿದ ಹಣ ನೀಡಲು ವಿಫಲವಾಗಿದೆ. ಹಾಗಾಗಿ ನಿಲ್ದಾಣವನ್ನು ಕೈಬಿಡಲಾಗಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಎಂಬೆಸ್ಸಿ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿರುವಾಗ, ಉಳಿದ ಹಣವನ್ನು ಪಾವತಿಸುವಂತೆ ಉಪಮುಖ್ಯಮಂತ್ರಿಗಳು ಆ ಸಂಸ್ಥೆಗೆ ಎಚ್ಚರಿಕೆ ನೀಡಬೇಕೆಂದು ಮುನಿರತ್ನ ಹೇಳುತ್ತಿದ್ದಾರೆ ಎಂದು ಡಿಸಿಎಂಗೆ ತಿರುಗೇಟು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನಾನೇಕೆ ಧಮ್ಕಿ ಹಾಕಲಿ, ಮುನಿರತ್ನ ಅವರದೇ ಆ ಭಾಗದಲ್ಲಿ 70-80 ಎಕರೆ ಜಮೀನಿದೆ. ಅವರು ಹಣ ಕೊಟ್ಟರೆ, ನಿಲ್ದಾಣಕ್ಕೆ ಅವರ ಹೆಸರನ್ನೇ ಇಡಲು ನಾನು ಸಿದ್ಧ ಎಂದು ಲೇವಡಿ ಮಾಡಿದರು.
ಮೆಟ್ರೋ 2ಎ ಹಾಗೂ 2ಬಿ ಯೋಜನೆಯು ಕೆಆರ್ ಪುರಂ ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿದ್ದು, ₹14,788 ಕೋಟಿ ವೆಚ್ಚದಲ್ಲಿ 58.19 ಕಿ.ಮೀ. ಉದ್ದದ ಈ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.
ಪ್ರಧಾನಿಗೆ ಬೆಳ್ಳಿ ಗಣೇಶ ಪ್ರತಿಮೆ: ಡಿಸಿಎಂ ಸ್ಪಷ್ಟನೆ :

ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ತಮ್ಮ ಸ್ವಂತದ್ದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಅಂದಿನ ಸಮಾರಂಭದಲ್ಲಿ ತಾವು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ತಮ್ಮ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು. ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ತಮಗೆ ಬಂದಿಲ್ಲ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.






















