ಬೆಂಗಳೂರು, ಆ.11 www.bengaluruwire.com : ರಾಜ್ಯಾದ್ಯಂತ ಕೃಷಿ ಜಾರಿ ದಳವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಕ್ರಮ ರಸಗೊಬ್ಬರ ಸಾಗಣೆ ಮತ್ತು ದಾಸ್ತಾನು ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಇತ್ತೀಚೆಗೆ ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಒಟ್ಟು 849 ಯೂರಿಯಾ ಚೀಲಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಾಳೆಹೊನ್ನೂರಿನಲ್ಲಿ 299 ಯೂರಿಯಾ ಚೀಲ ವಶ :
ಕೃಷಿ ಇಲಾಖೆಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ, ಆಗಸ್ಟ್ 7 ರಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಸಿಗೋಡು ಸುಭಾಷನಗರದಲ್ಲಿ ದಾಳಿ ನಡೆಸಲಾಯಿತು. ಸಿಗೋಡು ಸುಭಾಷನಗರದ ವೇಮನಹಳ್ಳಿ ರಸ್ತೆಯಲ್ಲಿ KA-03 AA-3924 ನೋಂದಣಿಯ ಲಾರಿಯಲ್ಲಿ ಸಾಗಿಸುತ್ತಿದ್ದ 220 ಚೀಲ ಯೂರಿಯಾ ಮತ್ತು ವಿಲ್ಫ್ರೆಡ್ ಕ್ಲೋಡ್ ಲೋಬೋ ಅವರ ಮನೆಯ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 79 ಚೀಲ ಯೂರಿಯಾ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.
ದಾಸ್ತಾನುದಾರ ವಿಲ್ಫ್ರೆಡ್ ಕ್ಲೋಡ್ ಲೋಬೋ ಅವರ ಬಳಿ ಮಾರಾಟ ಪರವಾನಗಿ, ಇನ್‌ವಾಯ್ಸ್ ಅಥವಾ ಇ-ವೇ ಬಿಲ್ ಸೇರಿದಂತೆ ಯಾವುದೇ ದಾಖಲೆಗಳು ಇರಲಿಲ್ಲ. ಆದ್ದರಿಂದ, ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚನ್ನಗಿರಿಯಲ್ಲಿ 550 ಚೀಲ ಗೊಬ್ಬರ ವಶ :
ಇದೇ ರೀತಿ, ಶಿವಮೊಗ್ಗ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರು ಚನ್ನಗಿರಿ ವ್ಯಾಪ್ತಿಯಲ್ಲಿ ರಸ್ತೆ ಜಾಗೃತಿ ಪರಿಶೀಲನೆ ನಡೆಸುತ್ತಿದ್ದಾಗ, ಯೂರಿಯಾ ಸಾಗಿಸುತ್ತಿದ್ದ ಒಂದು ವಾಹನವನ್ನು ತಡೆದು ತಪಾಸಣೆ ಮಾಡಲಾಯಿತು. ಈ ವೇಳೆ, ಲಾರಿಯಲ್ಲಿದ್ದ ಯೂರಿಯಾ ಪ್ರಮಾಣಕ್ಕೂ ಇನ್‌ವಾಯ್ಸ್‌ನಲ್ಲಿ ನಮೂದಾಗಿದ್ದ ಪ್ರಮಾಣಕ್ಕೂ ವ್ಯತ್ಯಾಸ ಕಂಡುಬಂದಿದೆ.
ಈ ಬಗ್ಗೆ ಸಮನ್ವಯತೆ ಸಾಧಿಸಲು ಕೃಷಿ ಇಲಾಖೆ ಅಧಿಕಾರಿಗಳ ನೆರವು ಪಡೆದು ಲಾರಿ ಮಾಲೀಕರು ಮತ್ತು ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಯಿತು. ಆದರೆ, ಅವರಿಂದ ಸೂಕ್ತ ಉತ್ತರ ಬಾರದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ, ಒಟ್ಟು 550 ಮೂಟೆ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಎರಡೂ ಪ್ರಕರಣಗಳು ರಾಜ್ಯಾದ್ಯಂತ ನಡೆಯುತ್ತಿರುವ ತೀವ್ರ ತಪಾಸಣೆಗಳ ಭಾಗವಾಗಿವೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.






















