ಬೆಂಗಳೂರು, ಆ.11 www.bengaluruwire.com : ನಮ್ಮ ಮೆಟ್ರೋ ಮೆಜಿಸ್ಟಿಕ್ ಸ್ಟೇಷನ್ ನಲ್ಲಿ ರೈಲು ಬರುವಾಗ ಹಳಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಇಂದು ರಾತ್ರಿ 10.15ರ ಸುಮಾರಿಗೆ ನಡೆದಿದೆ ಎಂದು ತಿಳದುಬಂದಿದೆ. ಆದರೆ ನಮ್ಮ ಮೆಟ್ರೋ ಅಧಿಕಾರಿಗಳು, ವ್ಯಕ್ತಿಯೊಬ್ಬ ರೈಲಿನ ಮುಂದೆ ಹಾರಿ ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮೆಜಿಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಆತ್ಯಹತ್ಯೆಗೆ ಯತ್ನಿಸಿದ ವ್ಯಕ್ತಿಯು ಹಳಿಯ ಮೇಲೆ ಹಾರುತ್ತಿದ್ದಂತೆ ಸ್ಥಳದಲ್ಲಿದ್ದ ಮೆಟ್ರೋ ಸಿಬ್ಬಂದಿ ಹಳಿಯ ಮೇಲಿನ ವಿದ್ಯುತ್ ಕಡಿತಗೊಳಿಸಿದರು. ಘಟನೆ ನಡೆದ ಬಳಿಕ ಮೆಜಿಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ರೆಡ್ ಅಲರ್ಟ್ ಕೊಟ್ಟು ಕೆಲ ಕಾಲ ಕಾರ್ಯಾಚರಣೆ ಬಂದ್ ಮಾಡಲಾಯಿತು ಎಂಬ ಮಾಹಿತಿ ತಿಳಿಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ರಾತ್ರಿ ಮಂತ್ರಿಮಾಲ್ ಮೆಟ್ರೊ ಸ್ಟೇಷನ್ ನಿಂದ ನ್ಯಾಷನಲ್ ಕಾಲೇಜು ಕಡೆ ಸಾಗಲು ಮೆಟ್ರೋ ರೈಲು ಹತ್ತಿದ್ದೆವು. ರಾತ್ರಿ 10.05 ಸಂದರ್ಭದಲ್ಲಿ ಮೆಜಿಸ್ಟಿಕ್ ನಿಲ್ದಾಣ ಬರುವ ಸಂದರ್ಭದಲ್ಲಿ ನಾವಿದ್ದ ರೈಲು ಸ್ವಲ್ಪ ಅಲುಗಾಡಿದಂತೆ ಭಾಸವಾಯಿತು. ಅದಾದ 10 ನಿಮಿಷ ನಾವಿದ್ದ ರೈಲಿನ ಬಾಗಿಲು ಸ್ಟೇಷನ್ ಬಂದರು ತೆಗೆದಿರಲಿಲ್ಲ. ಆಮೆಲೆ ಯುವಕನೊಬ್ಬ ರೈಲುಹಳಿ ಮೇಲೆ ಹಾರಿದ್ದು, ರೈಲು ಅವರ ಮೇಲೆ ಹರಿದು ಹೋಯ್ತು. ಬಳಿಕ ಆತನನ್ನು ಅಲ್ಲಿಂದ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಎಂದು ಮಾಹಿತಿ ತಿಳಿದು ಬಂದಿದೆ. ಆನಂತರವಷ್ಟೇ ನಾವಿದ್ದ ರೈಲಿನ ಬಾಗಿಲು ತೆರೆದುಕೊಂಡು ನಾವೆಲ್ಲ ಆಚೆ ಬಂದೆವು. ಘಟನೆ ನಡೆದ ನಂತರವೂ ಅರ್ಧ ಗಂಟೆಯ ಬಳಿಕ ರೈಲು ದುರ್ಘಟನೆಯ ಸ್ಥಳದಿಂದ ತೆರಳಲಿದೆ ಎಂಬ ಮಾಹಿತಿ ತಿಳಿಯಿತು” ಎಂದು ಪ್ರತ್ಯಕ್ಷದರ್ಶಿ ಸುನಿಲ್ ಎಂಬುವರು ಮಾಹಿತಿ ನೀಡಿದ್ದಾರೆ.
ರಾತ್ರಿ 10.04 ರ ಸಂದರ್ಭದಲ್ಲಿ ಮೆಟ್ರೋ ಸ್ಟೇಷನ್ ನಲ್ಲಿ ರೈಲಿನ ಮುಂಭಾಗ ವ್ಯಕ್ತಿಯೊಬ್ಬರು ಹಾರಿ,ರೈಲು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. 10.28ಕ್ಕೆ ಪುನಃ ಸೇವೆ ಆರಂಭಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಆದರೆ ಗಂಭಿರವಾಗಿ ಗಾಯಗೊಂಡ ವ್ಯಕ್ತಿಯನ್ನು ಯಾವ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಎಂಬ ವಿವರ ತಿಳಿಸಿಲ್ಲ.

ರೈಲಿನ ಕಾರ್ಯಾಚರಣೆ ಕೆಲಕಾಲ ನಿಂತಿದ್ದಕ್ಕೆ ಮನೆ ಕಡೆಗೆ ಹೊರಟ ಸಾವಿರಾರು ಮಂದಿ ನಿಲ್ದಾಣದಲ್ಲೇ ಆತಂಕದಲ್ಲಿ ಪರಸ್ಪರ ಇದೇ ವಿಷಯ ಸ್ಪಷ್ಟವಾಗಿ ತಿಳಿಯದೆ ಕೆಲವು ಕಾಲ ಗೊಂದಲಕ್ಕೆ ಒಳಗಾಗಿದ್ದರು. ಭಾನುವಾರವಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಳದಿ ಮಾರ್ಗವನ್ನು ಲೋಕಾರ್ಪಣೆಗೊಳಿಸಿ, ಇಂದನಿಂದ ವಾಣಿಜ್ಯ ಕಾರ್ಯಾಚರಣೆ ಆರಂಭಗೊಂಡಿತ್ತು. ಬೆಂಗಳೂರಿಗರು ಹೊಸ ಮಾರ್ಗ ಸಂಚಾರ ಆರಂಭವಾದ ಖುಷಿಯಲ್ಲಿರುವಾಗಲೇ ಆತ್ಮಹತ್ಯೆಗೆ ಯತ್ನಿಸಿ ಯುವಕ ಸಾವನ್ನಪ್ಪಿರುವ ಸುದ್ದಿ ಮೆಟ್ರೋ ಪ್ರಯಾಣಿಕರ ಕಳವಳಕ್ಕೆ ಕಾರಣವಾಗಿದೆ.






















