ಪೆನ್ಸಿಲ್ವೇನಿಯಾ, ಆ.10 www.bengaluruwire.com : ಶಾಲೆಯೆಂದರೆ ಕೇವಲ ಪಾಠ ಹೇಳುವ ಜಾಗವಲ್ಲ, ಅದು ಮಕ್ಕಳ ಭವಿಷ್ಯ ರೂಪಿಸುವ ತಾಣ. ಈ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಅಮೆರಿಕಾದ ಪೆನ್ಸಿಲ್ವೇನಿಯಾದ ಪ್ರಿನ್ಸಿಪಾಲ್ ಒಬ್ಬರು ಈಗ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ತಮ್ಮ ವಿಶಿಷ್ಟ ಶೈಲಿಯಿಂದ ಮಕ್ಕಳ ಮನ ಗೆದ್ದಿರುವ ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾಂಕಾಸ್ಟರ್ ಕೌಂಟಿಯ ಪ್ರಾವಿಡೆನ್ಸ್ ಎಲಿಮೆಂಟರಿ ಶಾಲೆಯ ಪ್ರಾಂಶುಪಾಲರಾದ ಜಾಕ್ ಬಾವರ್ಮಾಸ್ಟರ್, ಪ್ರತಿದಿನ ಶಾಲೆಯ ಮುಖ್ಯ ದ್ವಾರದಲ್ಲಿ ನಿಂತು ಮಕ್ಕಳನ್ನು ಸ್ವಾಗತಿಸುತ್ತಾರೆ. ಆದರೆ, ಇದು ಸಾಮಾನ್ಯ ಸ್ವಾಗತವಲ್ಲ. ಅವರು ಪ್ರತಿ ವಿದ್ಯಾರ್ಥಿಯೊಂದಿಗೂ ಹೈ-ಫೈವ್, ಫಿಸ್ಟ್-ಬಂಪ್ (ಮುಷ್ಟಿ ಬಡಿತ- ಇದು ಹಸ್ತಲಾಘವದ ಸಾಂದರ್ಭಿಕ ಮತ್ತು ಸ್ನೇಹಪರ ಪರ್ಯಾಯವಾಗಿದೆ,) ಮಾಡುತ್ತಾರೆ, ನಗುಮುಖದಿಂದ ಮಾತನಾಡಿಸುತ್ತಾರೆ. ಕೇವಲ ಒಂದು ಕ್ಲಿಪ್‌ನಲ್ಲಿ ಸೆರೆಯಾಗಿರುವ ಈ ವಿಡಿಯೋ, ಬಾವರ್ಮಾಸ್ಟರ್ ಅವರ ಪೋಸ್ಟ್‌ನೊಂದಿಗೆ 376 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:
ಬಾವರ್ಮಾಸ್ಟರ್ ಅವರ ಈ ನಡೆ ಶಾಲೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಶಾಲಾ ಕಾರಿಡಾರ್‌ಗಳು ಕೇವಲ ಓಡಾಟದ ಜಾಗವಾಗಿ ಉಳಿಯದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾವನಾತ್ಮಕವಾಗಿ ಬೆಸೆದುಕೊಳ್ಳುವ ತಾಣವಾಗಿ ಮಾರ್ಪಟ್ಟಿವೆ. “ಸಂಬಂಧ ಗಟ್ಟಿಗೊಳಿಸುವುದೇ ಶಿಕ್ಷಣದ ಮುಖ್ಯ ಉದ್ದೇಶ. ನಾವು ಜನರನ್ನು ಹೇಗೆ ಸ್ವಾಗತಿಸುತ್ತೇವೆ ಎಂಬುದನ್ನು ಅವಲಂಬಿಸಿ ಅವರು ಎಂತಹ ಭಾವನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿರ್ಧಾರವಾಗುತ್ತದೆ. ಶಾಲೆಯೆಂದರೆ ಮಕ್ಕಳು ಖುಷಿಯಿಂದ ಬರಲು ಬಯಸುವ ಸ್ಥಳವಾಗಿರಬೇಕು. ಖುಷಿಯಾಗಿರುವುದನ್ನು ಮರೆಯಬೇಡಿ!” ಎಂದು ಬಾವರ್ಮಾಸ್ಟರ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣದ ಬಳಕೆದಾರರು ಬಾವರ್ಮಾಸ್ಟರ್ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಇಂತಹ ಶಿಕ್ಷಕರು ಸಿಗುವುದು ಅಪರೂಪ. ಇವರನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ,” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಇವರು ಹಾಕಿಕೊಟ್ಟ ದಾರಿಯಲ್ಲಿ ಮಕ್ಕಳು ಕೂಡ ಒಬ್ಬರನ್ನೊಬ್ಬರು ಸಂಭ್ರಮದಿಂದ ಸ್ವಾಗತಿಸುವುದನ್ನು ನೋಡುವುದು ಮತ್ತಷ್ಟು ಸಂತೋಷ ನೀಡುತ್ತದೆ,” ಎಂದು ಹೇಳಿದ್ದಾರೆ.
ಎಲ್ಲರಿಗೂ ಸ್ಫೂರ್ತಿ:
‘ಪೀಪಲ್’ ನಿಯತಕಾಲಿಕದೊಂದಿಗೆ ಮಾತನಾಡಿದ ಬಾವರ್ಮಾಸ್ಟರ್, “ನನ್ನ ಪ್ರಿನ್ಸಿಪಾಲ್ ಸ್ಥಾನದ ಮುಖ್ಯ ಗುರಿ, ಮಕ್ಕಳು ಖುಷಿಯಿಂದ ಶಾಲೆಗೆ ಬರುವಂತೆ ಮಾಡುವುದು, ಶಿಕ್ಷಕರೂ ಉತ್ಸಾಹದಿಂದ ಕೆಲಸ ಮಾಡುವಂತೆ ಪ್ರೋತ್ಸಾಹಿಸುವುದು ಮತ್ತು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಮ್ಮೆಪಡುವಂತಹ ವಾತಾವರಣ ನಿರ್ಮಿಸುವುದು,” ಎಂದು ಹೇಳಿದ್ದಾರೆ. ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ ಬಾವರ್ಮಾಸ್ಟರ್ ಒಬ್ಬ ಲೇಖಕರೂ ಹೌದು. ಅವರ ಈ ನಡೆ ಅಮೆರಿಕಾದಲ್ಲಿ ಮಾತ್ರವಲ್ಲ, ಇಡೀ ವಿಶ್ವದ ಶಿಕ್ಷಕ ಸಮುದಾಯಕ್ಕೆ ಸ್ಫೂರ್ತಿಯಾಗಿದೆ.






















