ನವದೆಹಲಿ, ಆ.02 www.bengaluruwire.com : ಭಾರತ ಚುನಾವಣಾ ಆಯೋಗ (ಇಸಿಐ) ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ವಾರ್ಷಿಕ ಸಂಭಾವನೆಯನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಿದೆ. ಬೂತ್ ಮಟ್ಟದ ಅಧಿಕಾರಿಗಳ ಸಂಭಾವನೆಯನ್ನು ಕೊನೆಯ ಬಾರಿಗೆ 2015ರಲ್ಲಿ ಪರಿಷ್ಕರಿಸಲಾಗಿತ್ತು. ಈಗ ಅದನ್ನು ₹6,000 ದಿಂದ ₹12,000ಕ್ಕೆ ಹೆಚ್ಚಿಸಲಾಗಿದೆ.
ಇದಲ್ಲದೆ, ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳ ಸೂಪರ್ವೈಸರ್ಗಳ ಸಂಭಾವನೆಯನ್ನು ಸಹ ಹೆಚ್ಚಿಸಲಾಗಿದೆ. ಈ ಮೊದಲು ₹12,000 ಇದ್ದ ಇವರ ಸಂಭಾವನೆಯನ್ನು ಈಗ ₹18,000ಕ್ಕೆ ಹೆಚ್ಚಿಸಲಾಗಿದೆ. ಇದೇ ಮೊದಲ ಬಾರಿಗೆ, ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ ಒ) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ಎಇಆರ್ ಒ) ಸಹ ಗೌರವಧನ ನೀಡಲು ಆಯೋಗ ನಿರ್ಧರಿಸಿದೆ. ಇಆರ್ ಒಗಳಿಗೆ ₹30,000 ಮತ್ತು ಎಇಆರ್ ಒಗಳಿಗೆ ₹25,000 ಗೌರವಧನ ನೀಡಲಾಗುವುದು.
ಶುದ್ಧ ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಅಡಿಪಾಯ. ಇಆರ್ ಒ, ಎಇಆರ್ ಒ, ಬಿಎಲ್ಒ ಸೂಪರ್ವೈಸರ್ ಹಾಗೂ ಬಿಎಲ್ಒಗಳನ್ನೊಳಗೊಂಡ ಮತದಾರರ ಪಟ್ಟಿ ಯಂತ್ರವು ನಿಷ್ಪಕ್ಷಪಾತ ಮತ್ತು ಪಾರದರ್ಶಕ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯೋಗ ಹೇಳಿದೆ.
ಈ ನಿರ್ಧಾರವು ಚುನಾವಣಾ ಸಿಬ್ಬಂದಿಗೆ ಸೂಕ್ತ ಪರಿಹಾರ ನೀಡಿ, ನಿಖರ ಮತದಾರರ ಪಟ್ಟಿ ನಿರ್ವಹಿಸಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಬಲಪಡಿಸಲು ಆಯೋಗದ ಬದ್ಧತೆಯನ್ನು ತೋರಿಸುತ್ತದೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗಾಗಿ ಬಿಎಲ್ಒಗಳಿಗೆ ₹6,000 ವಿಶೇಷ ಪ್ರೋತ್ಸಾಹಧನ ನೀಡಲು ಆಯೋಗ ಅನುಮೋದಿಸಿದೆ. ಈ ಹೊಸ ಕ್ರಮವನ್ನು ಬಿಹಾರ ರಾಜ್ಯದಿಂದಲೇ ಪ್ರಾರಂಭವಾಗಲಿದೆ ಎಂದು ಆಯೋಗ ಹೇಳಿದೆ.























