ಬೆಂಗಳೂರು, ಜು.31 www.bengaluruwire.com : ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಯುಕ್ತರ ಅಧ್ಯಕ್ಷತೆಯಲ್ಲಿ ಜು.30 ವಿಡಿಯೊ ಕಾನ್ಫರೆನ್ಸ್ ಮೂಲಕ ಅಡುಗೆ ಎಣ್ಣೆ ಕುರಿತಂತೆ ಪ್ರಮುಖ ವಿಷಯದ ಬಗ್ಗೆ ಸಭೆ ನಡೆಯಿತು.
ಈ ಸಭೆಯಲ್ಲಿ ಕಡಿಮೆ ಟ್ರಾನ್ಸ್-ಫ್ಯಾಟ್ ಇರುವ ಅಡುಗೆ ಎಣ್ಣೆಗಳ ಬಳಕೆ, ಉಪಯೋಗಿಸಿದ ಅಡುಗೆ ಎಣ್ಣೆಯ ವಿಲೇವಾರಿ ಮತ್ತು ಅಡುಗೆ ಎಣ್ಣೆಯ ತಯಾರಿಕೆ, ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಫೋರ್ಟಿಫಿಕೇಶನ್ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಹೋಟೆಲ್ ಮಾಲೀಕರು, ಬೇಕರಿ ಮಾಲೀಕರು, ಎಫ್‌ಎಸ್‌ಎಸ್‌ಎಐ (FSSAI) ನೋಂದಾಯಿತ ಆರ್‍ಯುಸಿಒ ಏಜೆನ್ಸಿಗಳು ಮತ್ತು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಆಯುಕ್ತರಿಂದ ಪ್ರಮುಖ ಸೂಚನೆಗಳು:
ಸಭೆಯಲ್ಲಿ, ಆಯುಕ್ತರು ಅಡುಗೆ ಎಣ್ಣೆ ತಯಾರಕರಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದರು. ಎಲ್ಲಾ ಅಡುಗೆ ಎಣ್ಣೆ ತಯಾರಕರು ಎಫ್‌ಎಸ್‌ಎಸ್‌ಎಐ ನಿಯಮಗಳ ಪ್ರಕಾರ ಸರಿಯಾದ ಲೇಬಲಿಂಗ್ ಅನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಮತ್ತು ವಿಟಮಿನ್ ಎ ಮತ್ತು ಡಿ ಜೊತೆ ಬಲವರ್ಧಿಸಿದ ಅಡುಗೆ ಎಣ್ಣೆಯನ್ನು ಮಾತ್ರ ಮಾರಾಟ ಮಾಡಬೇಕು ಎಂದು ತಿಳಿಸಿದರು.

ಎಲ್ಲಾ ಅಡುಗೆ ಎಣ್ಣೆ ವ್ಯವಹಾರಸ್ಥರು ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಎಣ್ಣೆಯನ್ನು ವಿಶ್ಲೇಷಣೆ ಮಾಡಿಸಬೇಕು ಎಂದೂ ಸೂಚಿಸಲಾಯಿತು.
ಕ್ಯಾನ್ಸರ್ ತಜ್ಞರ ಸಲಹೆ:
ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ವಿಶಾಲ್ ರಾವ್ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಹೋಟೆಲ್ ಮತ್ತು ಬೇಕರಿ ಮಾಲೀಕರಿಗೆ ಸಲಹೆ ನೀಡಿದರು. ಹೃದಯ ಸಂಬಂಧಿ ರೋಗಗಳು ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಡೆಗಟ್ಟಲು ಕಡಿಮೆ ಟ್ರಾನ್ಸ್-ಫ್ಯಾಟ್ ಇರುವ ಅಡುಗೆ ಎಣ್ಣೆಯನ್ನು ಬಳಸಬೇಕೆಂದು ಅವರು ಒತ್ತಿ ಹೇಳಿದರು.
ಬಳಸಿದ ಅಡುಗೆ ಎಣ್ಣೆ ವಿಲೇವಾರಿ:
2024-25 ಮತ್ತು 2025-26 ರ ಆರ್ಥಿಕ ವರ್ಷಗಳಲ್ಲಿ ಒಟ್ಟು 32,68,990 ಲೀಟರ್ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ ಎಂದು ಆಯುಸಿಒ (Repurpose Used Cooking Oil -RUCO) ಏಜೆನ್ಸಿಗಳು ಆಯುಕ್ತರಿಗೆ ಮಾಹಿತಿ ನೀಡಿದವು.
ಸಂಗ್ರಹಿಸಿದ ಈ ಎಣ್ಣೆಯನ್ನು ಬಯೋ-ಡೀಸೆಲ್ ತಯಾರಿಕೆ ಘಟಕಗಳಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಲಾಯಿತು. ಹೋಟೆಲ್ ಸಂಘದ ಸದಸ್ಯರಿಗೆ ತಮ್ಮ ಬಳಕೆಯಾದ ಎಣ್ಣೆಯನ್ನು ಆರ್‍ಯುಸಿಒ ಏಜೆನ್ಸಿಗಳಿಗೆ ಹಸ್ತಾಂತರಿಸುವಂತೆ ಮತ್ತು ಅದನ್ನು ಪುನಃ ಬಳಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಯಿತು.






















